‘ಕ್ರಿಮಿನಲ್ ಕೇಸುಗಳ ಹಿಂತೆಗೆತ’: ಬಿಎಸ್‌ವೈ ಸರಕಾರದ ಅತಿರೇಕದ ಕ್ರಮ; ಎಸ್‌ಡಿಪಿಐ

ಬೆಂಗಳೂರು, ಆ.1: ರಾಜ್ಯದಲ್ಲಿ ಯಡಿಯೂರಪ್ಪ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಟಿಪ್ಪು ಜಯಂತಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ ನಂತರ ಇದೀಗ 2 ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ಕ್ರಿಮಿನಲ್ ಕೇಸುಗಳನ್ನು ವಾಪಸ್ ಪಡೆಯುವ ನಿರ್ಧಾರ ಕೈಗೊಂಡಿರುವುದು ಖಂಡನೀಯ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ತಿಳಿಸಿದ್ದಾರೆ.
ಕೋಮುವಾದ, ಕೊಲೆ, ಗಲಭೆಗಳಲ್ಲಿ ಭಾಗಿಯಾದವರಿಗೆ, ನೆರವಾದವರಿಗೆ ಬಿಜೆಪಿ ಸರಕಾರ ನೆರವು ನೀಡುವುದಾದರೆ ಈ ರಾಜ್ಯದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದತೆ ಉಳಿಯುವುದಾದರೂ ಹೇಗೆ ಎಂದು ಅವರು ಸರಕಾರವನ್ನು ಪ್ರಶ್ನಿಸಿದ್ದಾರೆ.
‘ನಾನು ದ್ವೇಷ ರಾಜಕಾರಣ ಮಾಡುವುದಿಲ್ಲ’ ಎಂದು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಭಾಷಣ ಮಾಡಿದ ಯಡಿಯೂರಪ್ಪ, ಈಗ ಇನ್ನಷ್ಟು ಹೆಚ್ಚಿನ ದ್ವೇಷ ರಾಜಕಾರಣ ಮುಂದುವರಿಸುತ್ತಿದ್ದಾರೆ. ಟಿಪ್ಪುಜಯಂತಿ ರದ್ದು, 2 ಸಾವಿರಕ್ಕೂ ಹೆಚ್ಚು ಕ್ರಿಮಿನಲ್ ಕೇಸುಗಳ ಹಿಂಪಡೆತ ಈ ಎರಡೂ ದ್ವೇಷ ರಾಜಕಾರಣದ ವಿಕೃತ ರೂಪವಾಗಿದೆ. ಇದು ರಾಜ್ಯದ ಹಿತಕ್ಕೆ ಮಾರಕ ಹಾಗೂ ರಾಜ್ಯದ ಜನರ ನಡುವೆ ಅಪನಂಬಿಕೆ, ಅಭದ್ರತೆಯನ್ನು ಹುಟ್ಟು ಹಾಕುತ್ತದೆ ಎಂದು ಅವರು ಹೇಳಿದ್ದಾರೆ.
ಯಡಿಯೂರಪ್ಪಮೊದಲು ರಾಜ್ಯದಲ್ಲಿ ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಆಲೋಚಿಸುವುದನ್ನು ಪ್ರಾರಂಭಿಸಬೇಕು. ಬಿಜೆಪಿ ಪ್ರತಿಪಕ್ಷ ಸ್ಥಾನದಲ್ಲಿದ್ದಾಗ ಆರ್ಭಟಿಸುತ್ತಿದ್ದ ಬರ ಪರಿಹಾರ, ಜಿಂದಾಲ್‌ಗೆ ಅಕ್ರಮ ಭೂಮಿ ನೀಡಿಕೆ ಇತ್ಯಾದಿಗಳ ಬಗ್ಗೆ ಈಗ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ತಿಳಿಸಿದ್ದಾರೆ.
ಆಡಳಿತ ವ್ಯವಸ್ಥೆಯನ್ನು ಮತ್ತೆ ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳುವಲ್ಲಿ ಯಾಕೆ ಬಿಜೆಪಿ ಸರಕಾರ ಮುಂದುವರಿಯುತ್ತಿಲ್ಲ. ಅವುಗಳನ್ನು ಬಿಟ್ಟು ಸದಾ ಕೋಮುವಾದಿ ಚಿಂತನೆಗಳಲ್ಲಿ ತೊಡಗಿಕೊಂಡರೆ ಇಡೀ ರಾಜ್ಯದಲ್ಲಿ ನಡೆಯುವ ಎಲ್ಲ ಅನಾಹುತಗಳಿಗೆ ಬಿಜೆಪಿ ಸರಕಾರವೇ ಪ್ರಮುಖ ಕಾರಣವಾಗುತ್ತದೆ ಎಂಬವುದನ್ನು ನೆನಪಿಸಿಕೊಳ್ಳಬೇಕೆಂದು ಅವರು ಎಚ್ಚರಿಸಿದ್ದಾರೆ.
ಯಡಿಯೂರಪ್ಪ ಸರಕಾರ ಕೈಗೊಂಡ 2 ಸಾವಿರಕ್ಕಿಂತಲೂ ಹೆಚ್ಚು ಕೇಸುಗಳ ಹಿಂತೆಗೆತದ ವಿರುದ್ಧ ರಾಜ್ಯದ ನ್ಯಾಯಾಲಯಗಳಲ್ಲಿ ಪ್ರಶ್ನಿಸುವುದಾಗಿ ಇಲ್ಯಾಸ್ ಮುಹಮ್ಮದ್ ತುಂಬೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







