ಚರ್ಚ್ ಆವರಣದಲ್ಲಿ ಮೆಟ್ರೋ ಕಾಮಗಾರಿಗೆ ವಿರೋಧ
ಬೆಂಗಳೂರು, ಆ.1: ಬಿಎಂಆರ್‌ಸಿಎಲ್‌ನಿಂದ ನಗರದ ಆಲ್ ಸೆಂಟ್ಸ್ ಚರ್ಚ್ ಆವರಣ ವಶಪಡಿಸಿಕೊಂಡು ಕಾಮಗಾರಿ ನಡೆಸಲು ಮುಂದಾಗಿರುವುದಕ್ಕೆ ಆಲ್ ಸೆಂಟ್ಸ್ ಚರ್ಚ್ ಕ್ಷೇಮಾಭಿವೃದ್ಧಿ ಸಂಘ ವಿರೋಧ ವ್ಯಕ್ತಪಡಿಸಿದೆ.
ನಗರದಲ್ಲಿಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಸದಸ್ಯ ಲಿಯೋ ಎಫ್. ಸಾಲ್ಡಾನಾ, ನಗರದಲ್ಲಿರುವ ಪ್ರಮುಖ ಚರ್ಚ್‌ಗಳಲ್ಲಿ ಆಲ್ ಸೆಂಟ್ಸ್ ಚರ್ಚ್ ಒಂದು ಆಗಿದೆ. ಇಲ್ಲಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಗಳಿಗೆ ನೂರಾರು ವರ್ಷಗಳ ಇತಿಹಾಸವಿದೆ. ಅಲ್ಲದೆ, ಈ ಚರ್ಚ್ ಆವರಣದಲ್ಲಿ ನೂರಕ್ಕೂ ಅಧಿಕ ಮರಗಳನ್ನು ಬೆಳೆಸಿದ್ದು, ಅದು ಪರಂಪರೆಯ ಸಂಕೇತವಾಗಿದೆ ಎಂದರು.
ಇತ್ತೀಚೆಗೆ ಮೆಟ್ರೊ ರೈಲು ನಿಗಮ ಚರ್ಚ್‌ನ ಆವರಣ ಸೇರಿದಂತೆ ಇನ್ನಿತರ ಕಡೆ ಸುರಂಗ ಮಾರ್ಗ ತೋಡಲು ತಯಾರಿ ನಡೆಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಚರ್ಚ್‌ನ ಆವರಣದಲ್ಲಿ ಮೆಟ್ರೋ ಕಾಮಗಾರಿ ನಡೆಸಬಾರದು ಎಂದು ಹೈಕೋರ್ಟ್ ಆದೇಶ ನೀಡಿದ್ದರೂ, ಬಿಎಂಆರ್‌ಸಿಎಲ್ ಕಾನೂನು ಬಾಹಿರವಾಗಿ ಕಾಮಗಾರಿ ನಡೆಸಲು ತಯಾರಿ ನಡೆಸಿರುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಪಾರಂಪರಿಕ ಕಟ್ಟಡವಾಗಿರುವ ಚರ್ಚ್‌ನ ಆವರಣ ಪ್ರಾರ್ಥನೆ ಮಾಡುವ ಸ್ಥಳವಾಗಿದೆ. ಇಲ್ಲಿರುವ ಮರಗಳನ್ನು ಕಡಿದು ಕಾಮಗಾರಿ ಮಾಡುವುದು ಸರಿಯಲ್ಲ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಗೂ ಜಾಗವನ್ನು ವಶಪಡಿಸಿಕೊಳ್ಳದಂತೆ ಮನವಿ ಮಾಡಲಾಗಿದೆ. ಈ ಸಂಬಂಧ ಹಿಂದಿನ ಮುಖ್ಯಮಂತ್ರಿಗೂ ಮನವಿ ಮಾಡಿದ್ದೆವು ಎಂದು ಅವರು ತಿಳಿಸಿದರು.
ಬಿಎಂಆರ್‌ಸಿಎಲ್ ಕಾನೂನು ಉಲ್ಲಂಘಿಸಿ ಕಾಮಗಾರಿ ನಡೆಸಲು ಉದ್ದೇಶಿಸಿರುವುದು ಕ್ರೈಸ್ತರ ಭಾವನೆಗೆ ಧಕ್ಕೆಯಾಗುತ್ತದೆ. ಯಾವುದೇ ಕಾರಣಕ್ಕೂ ಈ ಜಾಗದಲ್ಲಿ ಮೆಟ್ರೋ ಕಾಮಗಾರಿ ನಡೆಸಲು ಬಿಡುವುದಿಲ್ಲ. ಮೆಟ್ರೋ ಕಾಮಗಾರಿಯ ವಸ್ತುಗಳನ್ನು ಈ ಆವರಣದಲ್ಲಿ ಹಾಕುವುದರಿಂದ ಪರಿಸರ ಮಾಲಿನ್ಯವಾಗುವುದಲ್ಲದೆ, ಚರ್ಚ್‌ಗೆ ಪ್ರಾರ್ಥನೆಗೆ ಬರುವ ಭಕ್ತರಿಗೆ ಅನಾನುಕೂಲವಾಗಲಿದೆ. ಚರ್ಚ್ ಅಭಿವೃದ್ಧಿಗೆ ಮಾರಕವಾಗಿರುವ ಯೋಜನೆಯನ್ನು ಕೈಬಿಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಪತ್ರಿಕೋಗೋಷ್ಠಿಯಲ್ಲಿ ಹ್ಯಾರಿ ಡಿಸೋಜಾ, ಪ್ರೇಮ ಕುಮಾರ್, ಸಿಂತಿಯಾ ಸ್ಟೀಫನ್, ಪ್ರಿಯಾ ಚೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







