ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆ ; ಈ ಬಾರಿ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್‌ಗೆ ಗೌರವ
ಬೆಂಗಳೂರು, ಆ.1: ಸ್ವಾತಂತ್ರ ದಿನಾಚರಣೆ ಅಂಗವಾಗಿ ನಗರದ ಸಸ್ಯಕಾಶಿಯಲ್ಲಿ ಆಯೋಜಿಸುವ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಮೈಸೂರು ಸಂಸ್ಥಾನದ ಕೊನೆಯ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್‌ಗೆ ಅರ್ಪಣೆ ಮಾಡಲಾಗಿದ್ದು, ಪ್ರದರ್ಶನಕ್ಕೆ ಅಗತ್ಯವಾದ ಎಲ್ಲ ಸಿದ್ಧತೆಗಳು ಭರದಿಂದ ಸಾಗುತ್ತಿವೆ.
ಫಲಪುಷ್ಪ ಪ್ರದರ್ಶನವು ಆ.9 ರಿಂದ 18 ರವರೆಗೂ ನಡೆಯಲಿದ್ದು, ಇದು ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ 210 ನೇ ಪ್ರದರ್ಶನವಾಗಿದೆ. ಈ ಪ್ರದರ್ಶನದಲ್ಲಿ ದೇಶದಲ್ಲಿ ಸ್ವಾತಂತ್ರ ಪೂರ್ವದಲ್ಲಿಯೇ ಪ್ರಜಾಪ್ರಭುತ್ವ, ಪಂಚವಾರ್ಷಿಕ ಪದ್ಧತಿಯಂತಹ ಯೋಜನೆಗಳನ್ನು ಜಾರಿಗೆ ತಂದು ಮಾದರಿಯಾಗಿದ್ದ ಜಯ ಚಾಮರಾಜ ಒಡೆಯರ್‌ಗೆ ಪುಷ್ಪ ನಮನ ಸಲ್ಲಿಸಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ.
ಸಸ್ಯಕಾಶಿಯಲ್ಲಿ ಈಗಾಗಲೇ ಪ್ರದರ್ಶನಕ್ಕೆ ಎಲ್ಲ ರೀತಿಯ ಸಿದ್ಧತೆಗಳು ನಡೆಯುತ್ತಿದ್ದು, ಕಲಾವಿದರ ತಂಡ ಕೆಲಸದಲ್ಲಿ ಮಗ್ನವಾಗಿದೆ. ಚಾಮರಾಯ ಒಡೆಯರ್‌ರ 100 ನೆ ಜನ್ಮದಿನಾಚರಣೆ ಅಂಗವಾಗಿ ಹಲವು ಕಾರ್ಯಕ್ರಮಗಳೂ ಇಲ್ಲಿ ಮೂಡಿಬರಲಿದ್ದು, ಅವರು ನೀಡಿದ ಕೊಡುಗೆಗಳು ಹಾಗೂ ಸಾಧನೆಗಳ ಬಗ್ಗೆ ಜನರಿಗೆ ಪರಿಚಯಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗಾಜಿನ ಮನೆ ಒಳಗೆ ಜಯಚಾಮರಾಜ ವೃತ್ತ: ಜಯಚಾಮರಾಜ ಒಡೆಯರ್ ವಿಷಯಾಧಾರಿತ ಫಲಪುಷ್ಪಪ್ರದರ್ಶನವಾಗಿರುವುದರಿಂದ ಮೈಸೂರಿನಲ್ಲಿರುವ ಜಯಚಾಮರಾಜ ವೃತ್ತದ ಮಾದರಿಯನ್ನು ಹೂವುಗಳಿಂದ ಸಿದ್ಧಪಡಿಸಲಾಗುತ್ತಿದೆ. ಆ ವೃತ್ತದಲ್ಲಿರುವಂತೆಯೇ ಇಲ್ಲಿಯೂ ನಾಲ್ಕು ಕಂಬದ ಗೋಪುರ ಮಾಡಿ ಅದರ ಒಳಗೆ ಒಡೆಯರ್ ಪ್ರತಿಕೃತಿ ನಿಲ್ಲಿಸಲಾಗುತ್ತಿದೆ.
ಮೈಸೂರು ಸಂಸ್ಥಾನದ ದರ್ಬಾರ್: ಗಾಜಿನ ಮನೆ ಹಿಂಭಾಗದಲ್ಲಿ ಹೂವುಗಳಿಂದಲೇ ಮೈಸೂರು ಸಂಸ್ಥಾನದ ದರ್ಬಾರ್ ಸನ್ನಿವೇಶವನ್ನು ಮರು ಸೃಷ್ಟಿ ಮಾಡಲಾಗುತ್ತಿದೆ. ಇಲ್ಲಿ ಸಿಂಹಾಸನ, ಎರಡು ಆನೆಗಳು, ಸೇನಾಧಿಪತಿ, ಐದಾರು ಮಂದಿ ಸೈನಿಕರ ಪ್ರತಿಕೃತಿ ನಿರ್ಮಿಸಲಾಗುತ್ತಿದೆ.
ಸಾಧನೆಗಳ ಕುರಿತು ಮಾಹಿತಿ: ಜಯಚಾಮರಾಜ ಒಡೆಯರ್ ಸಾಧನೆಗಳ ಮಾಹಿತಿ ಕುರಿತು ಪ್ರದರ್ಶನದಲ್ಲಿ ಬೆಳಕು ಚೆಲ್ಲಲಾಗುತ್ತಿದೆ. ಈಗಾಗಲೇ ಇತಿಹಾಸ ತಜ್ಞರು ಹಾಗೂ ಅರಮನೆಯಿಂದ ಮಾಹಿತಿ ಕಲೆಹಾಕಲಾಗಿದೆ. ಕೂಲಿಕಾರ್ಮಿಕರಿಗೆ ವಿಮೆ ಜಾರಿ, ಮಹಿಳಾ ವೈದ್ಯರ ನೇಮಕ, ಉನ್ನತ ಶಿಕ್ಷಣಕ್ಕೆ ಆದ್ಯತೆ, ಕರ್ನಾಟಕ ಏಕೀಕರಣ ಹೋರಾಟ, ಆಕಾಶವಾಣಿ, ಎಚ್‌ಎಎಲ್ ನಿರ್ಮಾಣಕ್ಕೆ ಸಹಕಾರ ಸೇರಿದಂತೆ ವಿವಿಧ ಕೊಡುಗೆ ಬಗ್ಗೆ ಹೂವುಗಳು ಚಿತ್ರಾಕೃತಿ, ಛಾಯಾಚಿತ್ರ, ಫಲಕಗಳನ್ನು ಆಳವಡಿಸುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.