ಸುರತ್ಕಲ್, ಮುಕ್ಕ ಪರಿಸರದಲ್ಲಿ ವ್ಯಾಪಕ ಕಳ್ಳರ ಹಾವಳಿ, ಸ್ಥಳೀಯರಲ್ಲಿ ಆತಂಕ

ಸುರತ್ಕಲ್, ಆ.2: ಕಳೆದ ರವಿವಾರ ಸುರತ್ಕಲ್ ಹಾಗೂ ಮುಕ್ಕದಲ್ಲಿ ನಡೆದ ಕಳವು ಪ್ರಕರಣಗಳ ತನಿಖೆ ನಡೆಯುತ್ತಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ವ್ಯಾಪಕ ಬಲೆ ಬೀಸಿದ್ದಾರೆ.
ಸುರತ್ಕಲ್ ನ ಮದರ್ ಚೋಯ್ಸ್ ಬಟ್ಟೆ ಮಳಿಗೆಯ ಶಟರ್ ನ ಬೀಗ ಮುರಿದು ಕಳವಿಗೆ ಯತ್ನಿಸಲಾಗಿತ್ತು. ಮುಕ್ಕ ಮಸೀದಿ ಸಮೀಪದ ದಿನಸಿ ಅಂಗಡಿಗೆ ಕನ್ನ ಹಾಕಿದ್ದ ಕಳ್ಳರು ಸುಮಾರು 5 ಸಾವಿರ ರೂ. ನಗದು ದೋಚಿದ್ದರು. ಬಸ್ ನಿಲ್ದಾಣದ ಬಳಿಯ ಮೊಬೈಲ್ ಫೋನ್ ಅಂಗಡಿಯ ಬೀಗ ಮುರಿದು ಸುಮಾರು 50 ಸಾವಿರ ರೂ. ಬೆಲೆ ಬಾಳುವ ಮೊಬೈಲ್ ಫೋನ್ ಗಳನ್ನು ಲಪಟಾಯಿಸಿ ಪರಾರಿಯಾಗಿದ್ದಾರೆ.
ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರುಗಳೂ ದಾಖಲಾಗಿವೆ.
ಮೊಬೈಲ್ ಅಂಗಡಿಯಲ್ಲಿ ಕಳವು ನಡೆಸಿ ಪರಾರಿಯಾಗುತ್ತಿದ್ದ ಓರ್ವನ ಚಹರೆ ಪಕ್ಕದ ಅಂಗಡಿಯೊಂದರ ಸಿಸಿ ಟಿವಿಯಲ್ಲಿ ದಾಖಲಾಗಿತ್ತು.
ಸಿಸಿ ಟಿವಿಯ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ.
ಅನುಮಾನ: ಈ ನಡುವೆ ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾದ ವ್ಯಕ್ತಿಯ ಚಹರೆ ಹೋಲುವ ವ್ಯಕ್ಯಿಗಳು ಸುತ್ತಾಡುತ್ತಿರುವ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರೂ ಪೊಲೀಸರು ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.
ರಾತ್ರಿ ಗಸ್ತು ಹೆಚ್ಚಿಸಲು ಆಗ್ರಹ: ಮಳೆಗಾಲ ಆರಂಭವಾಗುತ್ತಿದಂತೆಯೇ ಕಳವು ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಸಂಬಂಧ ಪೊಲೀಸ ಇಲಾಖೆ ರಾತ್ರಿ ಪಾಳಿಯಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ ಗಸ್ತು ವ್ಯವಸ್ತೆಯನ್ನು ಹೆಚ್ಚಿಸ ಬೇಕು ಎಂದು ನಾಗರೀಕರು ಆಗ್ರಹಿಸಿದ್ದಾರೆ.








