ಮುಖ್ಯಮಂತ್ರಿ ಯಡಿಯೂರಪ್ಪ ಹೇಗೆ ಲಿಂಗಾಯುತ ?: ಸಾಣೆಹಳ್ಳಿ ಸ್ವಾಮೀಜಿ ಪ್ರಶ್ನೆ

ಉಡುಪಿ, ಆ. 2: ಲಿಂಗಾಯುತರು ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ ಎಂದು ಯಾರು ಹೇಳಿದರು. ಯಡಿಯೂರಪ್ಪ ಲಿಂಗಾಯುತರು ಎಂದು ಹೇಗೆ ಹೇಳುತ್ತೀರಿರೆಂದು ಸಾಣೆಹಳ್ಳಿ ತರಳಬಾಳು ಜಗತ್ ಗುರು ಶಾಖಾ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರಶ್ನಿಸಿದ್ದಾರೆ.
'ಮತ್ತೆ ಕಲ್ಯಾಣ' ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಲಿಂಗಾಯುತರೇ ಈಗ ಮುಖ್ಯಮಂತ್ರಿಯಾಗಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಅವರು ಈ ರೀತಿ ಮರು ಪ್ರಶ್ನೆ ಹಾಕಿದರು.
ಯಾರು ಲಿಂಗಾಯುತ ಧರ್ಮವನ್ನು ಪರಿಪಾಲನೆ ಮಾಡುತ್ತಾರೆಯೋ ಅವರೇ ಲಿಂಗಾಯುತ. ಅದು ಸಿದ್ದರಾಮಯ್ಯ ಆಗಿರಲಿ ಅಥವಾ ಕುಮಾರ ಸ್ವಾಮಿ ಆಗಿರಲಿ. ಲಿಂಗಾಯುತ ಎಂಬುದು ಒಂದು ತತ್ವ ಸಿದ್ಧಾಂತಕ್ಕೆ ಸೀಮಿತ ವಾಗಿದೆಯೇ ಹೊರತು ಒಂದು ಜಾತಿಗೆ ಅಲ್ಲ. ಹಾಗಾಗಿ ಯಡಿಯೂರಪ್ಪ ಲಿಂಗಾಯುತರಲ್ಲ. ಯಡಿಯೂರಪ್ಪ ಲಿಂಗಾಯುತ ತತ್ವವನ್ನು ಒಪ್ಪಿಕೊಂಡು ಅದಕ್ಕೆ ಅನುಗುಣವಾಗಿ ನಡೆದುಕೊಂಡಿದ್ದರೆ ನಾವು ಅವರನ್ನು ಲಿಂಗಾಯುತರು ಎಂಬುದಾಗಿ ಹೇಳಬಹುದು. ಅವರಲ್ಲಿ ಆ ತತ್ವ ಇದೆಯೋ ಇಲ್ಲವೋ ಎಂಬುದು ಎಲ್ಲರಿಗೂ ಗೊತ್ತು. ಅದರ ಬಗ್ಗೆ ವಿವರಣೆ ನಾನು ನೀಡಬೇಕಾಗಿಲ್ಲ ಎಂದು ಅವರು ತಿಳಿಸಿದರು.
ರಾಜ್ಯ ಸರಕಾರ ಮಠಗಳಿಗೆ ನೀಡುವ ಹಣವನ್ನು ನಾವು ಸ್ವೀಕಾರ ಮಾಡಲ್ಲ. ಯಾವುದಾದರೂ ಯೋಜನೆ ಹಾಕಿಕೊಂಡು ಅದಕ್ಕೆ ಪೂರಕವಾಗಿ ಅನುದಾನ ನೀಡಬೇಕು. ಅದು ಬಿಟ್ಟು ನೇರವಾಗಿ ಮಠಕ್ಕೆ ಹಣ ನೀಡಿದರೆ ನಾವು ತೆಗೆದುಕೊಳ್ಳುವುದಿಲ್ಲ. ಮೊದಲು ಮಠಗಳಿಗೆ ಹಣ ನೀಡಿದ ಯಡಿಯೂರಪ್ಪರನ್ನು ಟೀಕೆ ಮಾಡಿದ ಸಿದ್ದರಾಮಯ್ಯ, ಕುಮಾರಸ್ವಾಮಿ ಕೂಡ ಮುಂದೆ ಅದೇ ಕೆಲಸ ಮುಂದುವರೆಸಿದರು ಎಂದು ಅವರು ಹೇಳಿದರು.
ಲಿಂಗಾಯುತ ಧರ್ಮ ಮತ್ತು ವೀರಶೈವ ಧರ್ಮ ಎಂಬುದು ಒಂದೇ ಅಲ್ಲ. ಅದು ಎರಡೂ ಬೇರೆ ಬೇರೆ ಧರ್ಮಗಳಾಗಿವೆ. ಒಂದು ಕಾಲಕ್ಕೆ ಅವು ಎರಡು ಒಂದೇ ಎಂಬ ಭಾವನೆ ಇತ್ತು. ಆದರೆ ಶೈವ ಧರ್ಮದ ಎಲ್ಲ ಆಚರಣೆಗಳನ್ನು ವೀರಶೈವ ಒಳಗೊಂಡಿರುವುದರಿಂದ ಅದು ಲಿಂಗಾಯುತ ಧರ್ಮ ಆಗಲು ಸಾಧ್ಯವೇ ಇಲ್ಲ. ಬಸವ ಪರಂಪರೆಯ ಧರ್ಮಕ್ಕೂ ಪೇಜಾವರ ಸ್ವಾಮೀಜಿ ಹೇಳುವ ಧರ್ಮಕ್ಕೂ ತುಂಬಾ ಅಂತರ ಇರುವುದರಿಂದ ಇದು ಎರಡೂ ಒಂದೇ ಅಲ್ಲ ಎಂದರು.
ಪೇಜಾವರ ಸ್ವಾಮೀಜಿಯ ದೃಷ್ಠಿಯಲ್ಲಿ ಶಿವ ಎಂಬುದು ಗುಡಿಯಲ್ಲಿರುವ ಶಿವನ ವಿಗ್ರಹ ಎಂದು ಭಾವಿಸಿದ್ದಾರೆ. ಆದರೆ ಶಿವ ಎಂಬುದು ಇಷ್ಟ ಲಿಂಗ. ಅದು ಸ್ಥಾವರ ಅಲ್ಲ, ಜಂಗಮ. ಆದುದರಿಂದ ಅವರು ಹೇಳೋ ಶಿವನಿಗೂ ನಾವು ಹೇಳೋ ಶಿವನಿಗೆ ತುಂಬಾ ಅಂತರ ಇದೆ ಎಂದು ಸಾಣೆಹಳ್ಳಿ ಸ್ವಾಮೀಜಿ ಹೇಳಿದರು.







