ಜಿಪಿಎಸ್ ಸಂಕೇತ ಆಧರಿಸಿದ ಡಿಜಿಟಲ್ ಗಡಿಯಾರ ಆವಿಷ್ಕಾರ

ಬೆಂಗಳೂರು, ಆ.2: ಉಪಗ್ರಹ ಜಿಪಿಎಸ್ ಸಂಕೇತಗಳನ್ನು ಆಧರಿಸಿದ ಡಿಜಿಟಲ್ ಗಡಿಯಾರವನ್ನು ಸಪ್ತಗಿರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಬೋಧಕ ವರ್ಗದವರು ಆವಿಷ್ಕರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಆವಿಷ್ಕಾರದ ಬಗ್ಗೆ ವಿವರಿಸಿದ ವಿದ್ಯಾರ್ಥಿಗಳು, ಉಪಗ್ರಹದ ಜಿಪಿಎಸ್ ಮೂಲಕ ಸಮಯದ ಸಂಕೇತವನ್ನು ಈ ಗಡಿಯಾರ ಪಡೆಯಲಿದೆ. ಡಿಜಿಟಲ್ ತಾಂತ್ರಿಕ ವ್ಯವಸ್ಥೆಯನ್ನು ಹೊಂದಿರುವ ಈ ಗಡಿಯಾರ ಸೆಂಕೆಂಡ್, ನಿಮಿಷ ಹಾಗೂ ಗಂಟೆಯನ್ನು ಸ್ಪಷ್ಟವಾಗಿ ಪ್ರದರ್ಶಿಸುತ್ತದೆ ಎಂದು ಹೇಳಿದರು.
ಎಲ್‌ಇಡಿ ತಂತ್ರಜ್ಞಾನದ ಬೆಳಕಿನ ಮೂಲಕ ನಿಖರ ಸಮಯ ತೋರಿಸುವ ಈ ಗಡಿಯಾರ ಇತರೆ ಸಾಮಾನ್ಯ ಗಡಿಯಾರಗಳಂತೆ ಸಮಯ ಸೂಚಿಸುವ ಸಾಧನಗಳು (ಮುಳ್ಳುಗಳು) ಚಲಿಸುವುದಿಲ್ಲ. ಗಡಿಯಾರದ ಸ್ವಿಚ್ ಒತ್ತಿದರೆ ಕಾಂಪೆಕ್ಟ್ ಆಂಟೇನಾದಿಂದ ಕನಿಷ್ಠ ಮೂರು ಉಪಗ್ರಹಗಳಿಂದ ಜಿಪಿಎಸ್ ಸಂಕೇತವನ್ನು ಇದು ಸ್ವೀಕರಿಸುತ್ತದೆ. ನಂತರ ಸ್ವಯಂಚಾಲಿತವಾಗಿ ಗ್ರೀನ್‌ವಿಚ್ ಸರಾಸರಿ (ಸೌರ) ಕಾಲಮಾನವನ್ನು ಸೂಚಿಸುತ್ತದೆ ಎಂದು ವಿದ್ಯಾರ್ಥಿಗಳು ವಿವರಿಸಿದರು.
ಈ ಗಡಿಯಾರ ವಿದ್ಯುತ್ ಹಾಗೂ ಸೌರ ಶಕ್ತಿಯಲ್ಲೂ ಕಾರ್ಯನಿರ್ವಹಿಸುತ್ತದೆ. ಇದನ್ನು ಮನೆ ಬಳಕೆ, ವಿಮಾನ, ರೈಲ್ವೆ, ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಮಯ ತಿಳಿಯಲು ಬಳಸಬಹುದಾಗಿದೆ. ಪ್ರತಿ 60 ನಿಮಿಷಕ್ಕೊಮ್ಮೆ ಸರಿಯಾಗಿ ಸಮಯದ ಬಗ್ಗೆ ಧ್ವನಿ ಹೊರಹೊಮ್ಮುತ್ತದೆ. ಎಲ್ಲಿಗೆ ಬೇಕಾದರೂ ಸುಲಭವಾಗಿ ಕೊಂಡೊಯ್ಯಬಹುದು. ಸಮಯ ಸೂಚಿಸಲು ಬಳಸಿರುವ ಮುಳ್ಳುಗಳನ್ನು ಎಲ್‌ಇಡಿ ತಂತ್ರಜ್ಞಾನದಲ್ಲಿ ಕೆಂಪು, ನೀಲಿ ಮತ್ತು ಹಸಿರು ದೀಪ ಅಳವಡಿಸಲಾಗಿದೆ. ದೀಪಗಳು ಪ್ರಕಾಶಮಾನವಾಗಿರುವುದರಿಂದ ಹಗಲಿನಲ್ಲೂ ಸಮಯ ಗುರುತಿಸಬಹುದು ಎಂದು ಮಾಹಿತಿ ನೀಡಿದರು.
ಕಾಲೇಜಿನ ಪ್ರೊ.ದಿನೇಶ್ ಅನ್ವೇಕರ್ ಮಾತನಾಡಿ, ಮೂರು ಅಡಿ ವ್ಯಾಸ ಮತ್ತು ಮೂರು ಇಂಚು ಆಳದ ಗಡಿಯಾರವನ್ನು 10 ಸಾವಿರ ವೆಚ್ಚದಲ್ಲಿ ಮೂರು ವಾರಗಳಲ್ಲಿ ನಿರ್ಮಿಸಲಾಗಿದೆ. ಒಂದು ಇಂಚು ವ್ಯಾಸದ ಗಡಿಯಾರಕ್ಕೆ 4 ಸಾವಿರ ರೂ. ವೆಚ್ಚವಾಗಲಿದೆ. ಡಿಜಿಟಲ್ ಗಡಿಯಾರ ಉತ್ಪಾದನೆಯನ್ನು ವಿದ್ಯಾರ್ಥಿಗಳು ಇದೀಗ ನವೋದ್ಯಮವಾಗಿ ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ ಎಂದು ಹೇಳಿದರು.







