ಒಬ್ಬ ವ್ಯಕ್ತಿಯನ್ನು ‘ಉಗ್ರ’ ಎಂದು ಘೋಷಿಸುವ ಯುಎಪಿಎ ಮಸೂದೆಯ ಮುಖ್ಯಾಂಶಗಳು

ಹೊಸದಿಲ್ಲಿ, ಆ.2: ಯಾವುದೇ ವ್ಯಕ್ತಿಯನ್ನು 'ಉಗ್ರ' ಎಂದು ಹೆಸರಿಸಿ ಆತನ ಆಸ್ತಿಯನ್ನು ಜಪ್ತಿ ಮಾಡಲು ಕೇಂದ್ರ ಸರಕಾರಕ್ಕೆ ಅಧಿಕಾರ ನೀಡುವ ಉದ್ದೇಶದಿಂದ ಭಯೋತ್ಪಾದನೆ ನಿಗ್ರಹ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಶುಕ್ರವಾರ ಸಂಸತ್ ನಲ್ಲಿ ಅಂಗೀಕರಿಸಲಾಯಿತು.
ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ, (ಯುಎಪಿಎ) 1967ಕ್ಕೆ ತಿದ್ದುಪಡಿ ತರುವ ಕಾನೂನುಬಾಹಿರ ಚಟುವಟಿಕೆಗಳ (ತಡೆ) ತಿದ್ದುಪಡಿ ಮಸೂದೆ, 2019 ಅನ್ನು ಜುಲೈ 24ರಂದು ಲೋಕಸಭೆಯಲ್ಲಿ ಅಂಗೀಕರಿಸಲಾಗಿತ್ತು. ಈ ಮಸೂದೆಯನ್ನು ಆಯ್ಕೆ ಸಮಿತಿಗೆ ಪರಿಶೀಲನೆಗೆ ಕಳುಹಿಸಬೇಕು ಎಂಬ ವಿರೋಧ ಪಕ್ಷಗಳ ಆಗ್ರಹದ ನಡುವೆಯೂ ಶುಕ್ರವಾರ ರಾಜ್ಯಸಭೆಯಲ್ಲಿ ಈ ಮಸೂದೆಯನ್ನು ಅಂಗೀಕರಿಸಲಾಯಿತು. ಒಂದು ಸಂಘಟನೆಯನ್ನು ನಿಷೇಧಿಸಿದಾಗ ಇನ್ನೊಂದು ಸಂಘಟನೆಯನ್ನು ಸ್ಥಾಪಿಸುವ ಕಾರಣ ಅಂತಹ ವ್ಯಕ್ತಿಗಳನ್ನು 'ಉಗ್ರ' ಎಂದು ಹೆಸರಿಸುವುದು ಅನಿವಾರ್ಯ. ಈ ಕಾಯ್ದೆಯಲ್ಲಿ ನಾಲ್ಕು ಹಂತದ ಪರಿಶೀಲನೆಯ ಅವಕಾಶವನ್ನು ಒದಗಿಸಲಾಗಿದ್ದು, ಯಾವುದೇ ರೀತಿಯ ಮಾನವ ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ ಅದು ಮಾನವತೆಯ ವಿರುದ್ಧವಾಗಿದೆ ಎಂದು ಶಾ ಅಭಿಪ್ರಾಯಿಸಿದ್ದಾರೆ.
►ಯುಎಪಿಎ 2019ರ ಮುಖ್ಯಾಂಶಗಳು:
ಸದ್ಯ ತಿದ್ದುಪಡಿ ಮಾಡಲಾದ ಯುಎಪಿಎ ಮಸೂದೆಯಲ್ಲಿ ಉಗ್ರ ಅಥವಾ ಉಗ್ರವಾದದ ವ್ಯಾಖ್ಯಾನವನ್ನು ನೀಡಲಾಗಿಲ್ಲ. ಆದರೆ ಈ ಮಸೂದೆಯ 15ನೇ ವಿಧಿಯಲ್ಲಿ, ಏಕತೆ, ಸಮಗ್ರತೆ, ಭದ್ರತೆ, ಆರ್ಥಿಕ ಭದ್ರತೆ ಅಥವಾ ಭಾರತದ ಸಾರ್ವಭೌಮತೆಗೆ ಬೆದರಿಕೆಯೊಡ್ಡುವ ಅಥವಾ ಭಾರತದಲ್ಲಿ ಅಥವಾ ಇತರ ದೇಶದ ಜನರಲ್ಲಿ ಅಥವಾ ಜನರ ಒಂದು ವಿಭಾಗದಲ್ಲಿ ಭಯವನ್ನು ಸೃಷ್ಟಿಸುವ ಉದ್ದೇಶ ಹೊಂದಿರುವ ಕ್ರಮ ಅಥವಾ ನಡತೆಯನ್ನು ಭಯೋತ್ಪಾದಕ ಚಟುವಟಿಕೆ ಎಂದು ವ್ಯಾಖ್ಯಾನಿಸಲಾಗಿದೆ.
ಅಧಿಕೃತ ಗೆಜೆಟ್ ನಲ್ಲಿ ಅಧಿಸೂಚನೆಯ ಮೂಲಕ ಕೇಂದ್ರ ಸರಕಾರ ಓರ್ವ ವ್ಯಕ್ತಿಯನ್ನು 'ಉಗ್ರ' ಎಂದು ಹೆಸರಿಸಬಹುದಾಗಿದೆ. ಹಾಗೆ ಮಾಡುವುದಕ್ಕೂ ಮೊದಲು ಆ ವ್ಯಕ್ತಿಯನ್ನು ವಾದವನ್ನು ಆಲಿಸುವ ಅಗತ್ಯ ಇರುವುದಿಲ್ಲ. ವಿಶ್ವ ಸಂಸ್ಥೆಯ ಓರ್ವ ವ್ಯಕ್ತಿಯನ್ನು ಜಾಗತಿಕ 'ಉಗ್ರ' ಎಂದು ಘೋಷಿಸಿದ ಸಂದರ್ಭದಲ್ಲಿ ಆ ವ್ಯಕ್ತಿಯ ಪ್ರಯಾಣದ ಮೇಲೆ ನಿಷೇಧ, ಆಸ್ತಿಗಳ ಮುಟ್ಟುಗೋಲು ಮತ್ತು ಶಸ್ತ್ರಾಸ್ತ್ರ ಖರೀದಿಯ ಮೇಲೆ ನಿಷೇಧ ಹೇರಲಾಗುತ್ತದೆ. ಆದರೆ ಯುಎಪಿಎ ಮಸೂದೆಯಲ್ಲಿ ಅಂತಹ ಯಾವುದೇ ವಿವರಣೆ ನೀಡಲಾಗಿಲ್ಲ.
ಈ ಮಸೂದೆಯ ಪ್ರಕಾರ, ಓರ್ವ ವ್ಯಕ್ತಿಯನ್ನು 'ಉಗ್ರ' ಎಂದು ಘೋಷಿಸಲು ಆತನ ವಿರುದ್ಧ ದೂರು ದಾಖಲಿಸುವ ಅಥವಾ ಬಂಧಿಸುವ ಅಗತ್ಯವಿರುವುದಿಲ್ಲ. ತಿದ್ದುಪಡಿ ಕಾಯ್ದೆಯ ಪ್ರಕಾರ, 'ಉಗ್ರ' ಎಂಬ ಹಣೆಪಟ್ಟಿ ತೆಗೆದು ಹಾಕುವಂತೆ ವ್ಯಕ್ತಿ ಮನವಿ ಮಾಡಿದ ಸಂದರ್ಭದಲ್ಲಿ ಹಾಗೆ ಮಾಡುವ ಅಧಿಕಾರವೂ ಕೇಂದ್ರ ಸರಕಾರಕ್ಕಿದೆ. ಅಂತಹ ಅರ್ಜಿ ಪರಿಶೀಲಿಸುವ ಪ್ರಕ್ರಿಯೆ ಮತ್ತು ನಿರ್ಧಾರ ಮಾಡುವ ಪ್ರಕ್ರಿಯೆಯನ್ನು ಕೇಂದ್ರ ಸರಕಾರ ನಿರ್ಧರಿಸಲಿದೆ.
ಸರಕಾರ ಆತನ ಅರ್ಜಿಯನ್ನು ತಿರಸ್ಕರಿಸಿದರೆ ಆತ ಒಂದು ತಿಂಗಳ ಒಳಗಾಗಿ ಸರಕಾರ ರಚಿಸಿರುವ ಉಚ್ಚ ನ್ಯಾಯಾಲಯದ ಮಾಜಿ ಅಥವಾ ಹಾಲಿ ನ್ಯಾಯಾಧೀಶರ ನೇತೃತ್ವದ ನಾಲ್ಕು ಸದಸ್ಯರ ಪರಿಶೀಲನಾ ಸಮಿತಿಗೆ ತನ್ನ ಅರ್ಜಿಯನ್ನು ಪರಿಶೀಲನೆಗೆ ಕಳುಹಿಸಬಹುದಾಗಿದೆ. ಅಲ್ಲೂ ತಿರಸ್ಕೃತಗೊಂಡರೆ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ನ್ಯಾಯಾಲಯಗಳಲ್ಲೂ ಅರ್ಜಿ ಸಲ್ಲಿಸಬಹುದಾಗಿದೆ.







