ನಿರ್ಮಾಣ ಹಂತದ ನೀರಿನ ಹೊಂಡದಲ್ಲಿ ಉಸಿರುಗಟ್ಟಿ ಮೂವರ ಸಾವು

ಭುವನೇಶ್ವರ, ಆ.2: ನಿರ್ಮಾಣ ಹಂತದ ನೀರಿನ ಹೊಂಡದಲ್ಲಿ ಉಸಿರುಗಟ್ಟಿ ಮೂವರು ಸಾವನ್ನಪ್ಪಿದ ಘಟನೆ ಒಡಿಶಾದ ಭುವನೇಶ್ವರದ ಪಂಡಾರ ಎಂಬಲ್ಲಿ ಶುಕ್ರವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಬಸುದೇವ್ ಮಂಡಲ್, ಭೃಗುರಾಮ್ ಮಂಡಲ್ ಮತ್ತು ಸಮಿರನ್ ಮುನಿಯನ್ ಎಂದು ಗುರುತಿಸಲಾಗಿದ್ದು ಇವರೆಲ್ಲರೂ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರದ ನಿವಾಸಿಗಳಾಗಿದ್ದಾರೆ. ನೀರಿನ ಹೊಂಡಕ್ಕೆ ಅಳವಡಿಸಲಾಗಿದ್ದ ಕಾಂಕ್ರೀಟ್ ವಸ್ತುಗಳನ್ನು ತೆಗೆಯಲು ಈ ಕಾರ್ಮಿಕರು ಒಳಗೆ ಇಳಿದಿದ್ದು ಆಮ್ಲಜನಕದ ಕೊರತೆಯಿಂದ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ಕಟ್ಟಡದಲ್ಲಿ ಏಳು ಮಂದಿ ಕಾರ್ಮಿಕರು 20 ದಿನಗಳಿಂದ ಕೆಲಸ ಮಾಡುತ್ತಿದ್ದರು.
ಘಟನೆ ನಡೆದ ಸಂದರ್ಭದಲ್ಲಿ ಓರ್ವ ಬಾಣಸಿಗ ಸೇರಿದಂತೆ ಮೂವರು ಕಾರ್ಮಿಕರು ಸ್ಥಳದಲ್ಲಿದ್ದು ಉಳಿದವರು ಪಕ್ಕದ ಕಟ್ಟಡದಲ್ಲಿ ಕೆಲಸದಲ್ಲಿ ತೊಡಗಿದ್ದರು. ಮೊದಲು ಇಬ್ಬರು ಕಾರ್ಮಿಕರು ಹೊಂಡದೊಳಗೆ ಇಳಿದಿದ್ದು ಅವರನ್ನು ರಕ್ಷಿಸಲು ಬಾಣಸಿಗನೂ ಹೊಂಡದೊಳಗೆ ಪ್ರವೇಶಿಸಿದಾಗ ಆತನೂ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.





