ವೆಬ್ ಸೀರಿಯಲ್‌ನಿಂದ ಸಿನೆಮಾಕ್ಕೆ ಕುತ್ತು: ನಾಗತಿಹಳ್ಳಿ ಚಂದ್ರಶೇಖರ್

ಮಂಗಳೂರು, ಆ.2: ತಂತ್ರಜ್ಞಾನ ಬೆಳೆದಂತೆ ಹೊಸ ಹೊಸ ಆವಿಷ್ಕಾರಗಳು ಚಲನಚಿತ್ರ ರಂಗದಲ್ಲೂ ಕಾಣಿಸಿಕೊಂಡಿವೆ. ಇದೀಗ ವೆಬ್ ಸೀರಿಯಲ್‌ಗಳು ಹೆಚ್ಚೆಚ್ಚು ಮೂಡಿಬರುತ್ತಿವೆ. ಇದರಿಂದ ಸಿನೆಮಾಕ್ಕೆ ಅಪಾಯವಾಗುವ ಅತಂಕವಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡಮಿಯ ಅಧ್ಯಕ್ಷ ಡಾ. ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಚಲನಚಿತ್ರ ರಂಗ ಬೆಳೆಯುತ್ತಿವೆ. ಅದರಲ್ಲೂ ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿದ ಚಲನಚಿತ್ರಗಳು ಹೊರಬರುತ್ತಿವೆ. ಆದರೆ ಹೆಚ್ಚಿನ ನಿರ್ಮಾಪಕರು, ನಿರ್ದೇಶಕರು ಹೊಣೆಗಾರಿಕೆ ಮರೆತು ಬಿಡುತ್ತಿದ್ದಾರೆ. ಚಲನಚಿತ್ರವನ್ನು ಕಲೆಯಾಗಿ ಪರಿಗಣಿಸುವ ಬದಲು ವ್ಯಾವಹಾರಿಕ ಕ್ಷೇತ್ರವಾಗಿ ಕಾಣುತ್ತಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆಯಾಗಿದೆ. ಸಿನೆಮಾಗಳ ಸಂಖ್ಯೆಗಿಂತ ಗುಣಮಟ್ಟ ಹೆಚ್ಚಿಸುವ ಬಗ್ಗೆ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದರು.
ವೈಯಕ್ತಿಕವಾಗಿ ನಾನು ಡಬ್ಬಿಂಗ್‌ನ ಪರವೂ ಇಲ್ಲ. ವಿರೋಧವೂ ಇಲ್ಲ. ಆದರೆ, ಓರ್ವ ಸಾಹಿತಿಯಾಗಿ ಡಬ್ಬಿಂಗ್ ಮಾತ್ರವಲ್ಲ ರಿಮೇಕ್‌ನ್ನು ಕೂಡ ಇಷ್ಟಪಡಲಾರೆ. ಇದರಿಂದ ಸ್ವಂತಿಕೆ, ಸೃಜನಶೀಲತೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಡಬ್ಬಿಂಗ್‌ಗೆ ಕಾನೂನಿನಲ್ಲಿ ಅವಕಾಶವಿದ್ದರೂ ಕೂಡ ನಾನು ಈವರೆಗೆ ಅದನ್ನು ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ ಎಂದು ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.
ಕಥೆಗಳು ಮಾತ್ರ ಚಿತ್ರದ ಗುಣಮಟ್ಟಕ್ಕೆ ಮಾನದಂಡವಲ್ಲ. ತಾಂತ್ರಿಕತೆಯೂ ಮುಖ್ಯವಾಗಿದೆ. ಕನ್ನಡದಲ್ಲಿ ಹಿಂದಿ ಭಾಷೆಗಿಂತ ಅಧಿಕ ಚಲನಚಿತ್ರ ಬಿಡುಗಡೆಗೊಂಡಿದೆ. ಇದು ಹೆಮ್ಮೆಯ ವಿಚಾರವೋ, ಆತಂಕಕಾರಿಯೋ ಎಂಬುದು ಗೊತ್ತಾಗುತ್ತಿಲ್ಲ ಎಂದು ಪ್ರಶ್ನೆಯೊಂದಿಗೆ ಉತ್ತರಿಸಿದರು.
ರಾಜೀನಾಮೆ ಕೇಳಿಲ್ಲ: ಈವರೆಗೆ ರಾಜ್ಯ ಸರಕಾರವು ಕನ್ನಡ ಚಲನಚಿತ್ರ ಅಕಾಡಮಿಯ ಅಧ್ಯಕ್ಷ ಸ್ಥಾನಕ್ಕೆ ನನ್ನಿಂದ ರಾಜೀನಾಮೆ ಕೇಳಲಿಲ್ಲ. ಒಂದು ವೇಳೆ ಕೇಳಿದರೆ ತಕ್ಷಣ ಕೊಡುವೆ. ನಾನು ಯಾವುದೇ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡವನಲ್ಲ. ಹತ್ತಿದ ಮೆಟ್ಟಲಿನಿಂದಲೇ ಇಳಿಯಲು ನನಗೆ ಗೊತ್ತು. ಹಾಗಾಗಿ ರಾಜೀನಾಮೆ ಕೇಳಿದರೆ ಯಾವುದೇ ತಂಟೆ-ತಕರಾರು, ವಿರೋಧವಿಲ್ಲದೆ ರಾಜೀನಾಮೆ ಕೊಡುವೆ ಎಂದು ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.
ಅಕಾಡಮಿಯ ಕಾರ್ಯಚಟುವಟಿಕೆಗಳನ್ನು ವಿಕೇಂದ್ರೀಕರಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಜಗತ್ತಿನ 60 ದೇಶಗಳ ಚಲನಚಿತ್ರಗಳನ್ನು ಕನ್ನಡಿಗರು ಉಚಿತವಾಗಿ ವೀಕ್ಷಿಸುವ ಅವಕಾಶವನ್ನು ಬೆಂಗಳೂರಿನಲ್ಲಿ ನಡೆಸಿದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಮೂಲಕ ಮಾಡಿದ್ದೇನೆ. ಈವರೆಗೆ ಸರಕಾರ ವಹಿಸಿದ ಜವಾಬ್ದಾರಿಯನ್ನು ಬದ್ಧತೆಯಿಂದ ಕೆಲಸ ಮಾಡಿದ ತೃಪ್ತಿ ನನಗೆ ಇದೆ ಎಂದರು.







