ಯೋಗ್ಯ ಜನಪ್ರತಿನಿಧಿಗಳಿಂದ ಬಸವಣ್ಣನ ಜನತಂತ್ರ ಪರಿಕಲ್ಪನೆ ಸಾಕಾರ: ವೈಎಸ್‌ವಿ ದತ್ತ

ಉಡುಪಿ, ಆ.2: ಜನರು ಎಲ್ಲಿಯವರೆಗೆ ಜನಪರ, ಜೀವಪರ ನಿಲುವು ಹೊಂದಿರುವ ಯೋಗ್ಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವುದಿಲ್ಲವೊ ಅಲ್ಲಿಯವರೆಗೆ 12ನೆ ಶತಮಾನದಲ್ಲಿ ಬಸವಣ್ಣ ವ್ಯಾಖ್ಯಾನಿಸಿರುವ ಪರಿಶುದ್ಧ ವಾದ ಜನತಂತ್ರ ವ್ಯವಸ್ಥೆಯ ಪರಿಕಲ್ಪನೆ ಸಾಕಾರಗೊಳ್ಳಲು ಸಾಧ್ಯವಿಲ್ಲ ಎಂದು ಮಾಜಿ ಶಾಸಕ ಹಾಗೂ ಚಿಂತಕ ವೈ.ಎಸ್.ವಿ.ದತ್ತ ಹೇಳಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಸಾಣೇಹಳ್ಳಿಯ ಶ್ರೀತರಳಬಾಳು ಜಗದ್ಗುರು ಶಾಖಾ ಮಠದ ಸಹಮತ ವೇದಿಕೆಯ ವತಿಯಿಂದ ಉಡುಪಿ ಬಸವ ಸಮಿತಿಯ ಸಹ ಯೋಗದೊಂದಿಗೆ ಅಜ್ಜರಕಾಡು ಪುರಭವನದಲ್ಲಿ ಆಯೋಜಿಸಲಾದ ಮತ್ತೆ ಕಲ್ಯಾಣ ಕಾರ್ಯಕ್ರಮದ ಸಾರ್ವಜನಿಕ ಸಮಾವೇಶದಲ್ಲಿ ‘ಬಸವಣ್ಣ ಮತ್ತು ಜನತಂತ್ರ’ ಎಂಬ ವಿಷಯದ ಕುರಿತು ಅವರು ಮಾತನಾಡುತಿದ್ದರು.
ಇಂದು ಸೈದ್ಧಾಂತಿಕ ಬದ್ಧತೆ, ಪ್ರಾಮಾಣಿಕ ನಿಲುವು ರಾಜಕಾರಣಿಗಳಿಗೆ ಇರಬೇಕು.ಜನರಿಗೆ ಅಂಜುವವ ರಾಜಕಾರಣಿಯಾಗಬೇಕು. ಬಸವಣ್ಣನಿಗಿರುವ ತಾಕತ್ತು ಇಂದಿನ ಯಾವ ದೇಶದ ರಾಜಕಾರಣಿಗಳಿಗೂ ಇಲ್ಲ. ಅಧಿಕಾರ ಇದ್ದಾಗ ಕೆಲಸ ಮಾಡದೆ, ಮಾಜಿ ಆದ ಮೇಲೆ ಹಳಹಳಿಸುವುದರಲ್ಲಿ ಅರ್ಥವಿಲ್ಲ ಎಂದು ಅವರು ತಿಳಿಸಿದರು.
ಇಂಗ್ಲೆಂಡ್‌ನಲ್ಲಿ ಪ್ರಜಾಪ್ರಭುತ್ವ ಹುಟ್ಟುವ ನೂರು ವರ್ಷಗಳ ಮೊದಲೇ ಬಸವಣ್ಣ ಪ್ರಜಾಪ್ರಭುತ್ವಕ್ಕೆ ವ್ಯಾಖ್ಯಾನ ನೀಡಿದ್ದಾರೆ. ಜನತಂತ್ರದಲ್ಲಿ ವ್ಯಕ್ತಿ ಹಾಗೂ ಸಮಾಜದ ನಡುವೆ ಪೂರಕ ಮತ್ತು ಪ್ರೇರಕವಾದ ಸಂಬಂಧವಿದೆ. ಬಸವಣ್ಣ ವ್ಯಕ್ತಿ ಹಾಗೂ ಸಮಾಜವನ್ನು ಬೆಸೆಯುವ ಕೆಲಸ ಮಾಡಿದ್ದಾರೆ. ಬಸವಣ್ಣ ಆ ಕಾಲದಲ್ಲಿಯೇ ಸಾಮಾಜಿಕ ನ್ಯಾಯ ಹಾಗೂ ಅಹಿಂದ ಚಳುವಳಿಯನ್ನು ಹುಟ್ಟಿಹಾಕಿದ್ದರು ಎಂದರು.
ಉಡುಪಿ ಬಸವ ಸಮಿತಿಯನ್ನು ಉದ್ಘಾಟಿಸಿದ ಸಾಣೆಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವಚನಕಾರರು ಶ್ರದ್ಧೆ, ಭಕ್ತಿ, ಬದ್ಧತೆಯಿಂದ ಆಗ ಇದ್ದ ಸಮಸ್ಯೆಗಳನ್ನು ಹೋಗಲಾಡಿಸುವ ಪ್ರಯತ್ನ ಮಾಡಿದ್ದರು. ಕಾಲ, ಕಾಯಕ ಮತ್ತು ಕಾಸುಗಳ ಮಹತ್ವವನ್ನು ಮರೆತ ದ್ದರಿಂದಲೇ ಎಲ್ಲ ಅನಾಹುತಗಳು ಸಂಭವಿಸುತ್ತಿವೆ. ಸಿರಿಗರ ಎಂಬುದು ಇಂದು ಮಠಾಧಿಪತಿ ಹಾಗೂ ರಾಜಕಾರಣಿಗಳಿಗೆ ಹೊಡೆದಿದೆ. ಹೀಗಾಗಿ ಎಲ್ಲರೂ ಮದವೇರಿದ್ದಾರೆ ಎಂದರು.
ಮತದಾರ ಜಾಗೃತನಾದರೆ ನೇತಾರ ಜಾಗೃತನಾಗುತ್ತಾನೆ. ಹೀಗೆ ಬಸವಣ್ಣ ನೇತಾರರನ್ನು ಅವಲಂಭಿಸದೆ ಮತದಾರರನ್ನು ಅವಲಂಬಿಸಿದ್ದರು. ಬಸವಣ್ಣ ವೊದಲು ತಮ್ಮ ವ್ಯಕ್ತಿತ್ವವನ್ನು ತಾವು ತಿದ್ದಿ, ಜಾತಿಯ ಶ್ರೇಷ್ಠತೆಯಿಂದ ಹೊರ ಬಂದರು. ವಚನಕಾರರ ದಾಸೋಹ ಪ್ರಜ್ಞೆ ಇಂದಿನ ಜನರಿಗೆ ಬರಬೇಕಾಗಿದೆ. ಬಸವ ತತ್ವವನ್ನು ಅರಿತು ಆಚರಿಸುವ ನಿಷ್ಠೆ ಮತದಾರರಿಗೆ ಹಾಗೂ ನೇತಾರರಿಗೆ ಬರಬೇಕಾಗಿದೆ ಎಂದು ಅವರು ತಿಳಿಸಿದರು.
ತಾತ್ವಿಕ ಬದ್ಧತೆ ಇಲ್ಲದ ಬದುಕು ನರಕವಾಗುತ್ತದೆ. ಕಾಕಿ, ಕಾವಿ, ಖಾದಿ ಬಟ್ಟೆಗಳಿಗೆ ಇರುವ ಅರ್ಥವನ್ನು ಸಾಕಾರಗೊಳಿಸುವ ಪ್ರಯತ್ನ ಮಾಡಬೇಕು. ಆತ್ಮಶುದ್ಧಿಯಿಲ್ಲದೆ ಲೋಕ ಕಲ್ಯಾಣ ಸಾಧ್ಯವಿಲ್ಲ. ಜಾಗೃತಿ ಸಾಮಾನ್ಯ ಜನರಿಗಿಂತ ಅಧಿಕಾರ ಹೊಂದಿರುವವರಿಗೆ, ಜಾತಿಯ ಮೇಲ್ಪದರದಲ್ಲಿರುವವರಿಗೆ ಬರಬೇಕು ಎಂದು ಅವರು ಹೇಳಿದರು.
ಹಿರಿಯಡ್ಕ ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ನಿಕೇತನ ‘ವಚನಗಳ ಸಮಾನತೆಯ ಆಶಯ’ ವಿಷಯದ ಕುರಿತು ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಕನಕದಾಸ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಮೇಟಿ ಮುದಿಯಪ್ಪ ವಹಿಸಿದ್ದರು. ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಬಸವ ಸಮಿತಿ ಅಧ್ಯಕ್ಷ ಅಧ್ಯಕ್ಷ ಜಿ.ಎಂ.ಪಾಟೀಲ ಉಪಸ್ಥಿತರಿದ್ದರು.
ಸ್ವಾಗತ ಸಮಿತಿಯ ಅಧ್ಯಕ್ಷ ಯು.ಸಿ.ನಿರಂಜನ್ ಸ್ವಾಗತಿಸಿದರು. ದಿನಕರ್ ಬೇಂಗ್ರೆ ವಂದಿಸಿದರು. ತ್ರಿವೇಣಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಣೇಹಳ್ಳಿ ಸ್ವಾಮೀಜಿ ರಚನೆಯ ಹಾಗೂ ಜಗದೀಶ್ ಆರ್. ನಿರ್ದೇಶನದ ‘ಮೋಳಿಗೆ ಮಾರಯ್ಯ’ ನಾಟಕ ಪ್ರದರ್ಶನಗೊಂಡಿತು. ಇದಕ್ಕೂ ಮುನ್ನ ನಗರದ ಬೋರ್ಡ್ ಹೈಸ್ಕೂಲ್‌ನಿಂದ ಅಜ್ಜರಕಾಡುವಿನ ಪುರಭವನದವರೆಗೆ ಸಾಮರಸ್ಯ ನಡಿಗೆ ನಡೆಯಿತು.







