ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಭಾಸ್ಕರ್ ರಾವ್ ಪದಗ್ರಹಣ

ಬೆಂಗಳೂರು, ಆ.2: ರಾಜಧಾನಿ ಬೆಂಗಳೂರಿನೊಳಗೆ ಸೈಕಲ್‌ನಲ್ಲಿಯೇ ಓಡಾಡಿದ ನನಗೆ ಇಂದು, ಜನ ಸೇವೆ ಮಾಡುವ ಭಾಗ್ಯ ದೊರೆತಿದ್ದು, ಪ್ರತಿಯೊಬ್ಬರ ರಕ್ಷಣೆಗೆ ಬದ್ಧನಾಗಿರುತ್ತೇನೆ ಎಂದು ನಗರದ ನೂತನ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದರು.
ಶುಕ್ರವಾರ ನೂತನ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಸವನಗುಡಿ ನ್ಯಾಶನಲ್ ಕಾಲೇಜು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಓದಿದ ನಾನು ಮೂಲತಃ ಬೆಂಗಳೂರಿಗ. ನಡೆದುಕೊಂಡು, ಸೈಕಲ್ ಹಾಗೂ ಕಾರಿನಲ್ಲಿಯೇ ಓಡಾಡಿದ ನನಗೆ, ಇಂದು ಕೋಟ್ಯಂತರ ಜನರ ರಕ್ಷಣೆಯ ಜವಾಬ್ದಾರಿ ಬಂದಿದೆ ಎಂದರು.
ಮಾದಕ ಮುಕ್ತ: ರಾಜಧಾನಿಯೊಳಗೆ ಮಾದಕ ಮಾರಾಟ ಜಾಲ ಹಬ್ಬಿಕೊಂಡಿದೆ. ಇದನ್ನು ಮೊದಲು ಕೊನೆಗೊಳಿಸಬೇಕು. ಈ ನಿಟ್ಟಿನಲ್ಲಿ ತುರ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಜೊತೆಗೆ, ಪ್ರತಿ ಮನೆಯಲ್ಲಿಯೂ ಜಾಗೃತಿ ಮೂಡಿಸಲಾಗುವುದು. ಇದಕ್ಕೆ ಪ್ರಜೆಗಳ ಸಹಕಾರವೂ ಅತ್ಯಗತ್ಯ ಎಂದು ಅವರು ಹೇಳಿದರು.
ಜನಸ್ನೇಹಿ ಎಂದರೆ, ಕೇವಲ ದಾಖಲೆಯೂ ಅಲ್ಲ, ವರದಿಯೂ ಅಲ್ಲ. ಬದಲಾಗಿ, ಜನರೇ ಇದರ ಅನುಭವ ಹಂಚಿಕೊಂಡು, ಪೊಲೀಸರ ಬಳಿ ಬರಬೇಕು ಎಂದು ಪ್ರತಿಪಾದಿಸಿದ ಅವರು, ಪೇದೆಗಳಿಗೆ ಹೆಚ್ಚಿನ ಜವಾಬ್ದಾರಿ ನೀಡುವ ಮೂಲಕ ಅವರ ಮನೋಭಾವ ಹೆಚ್ಚಿಸಲಾಗುವುದು. ಆಗ, ಸಣ್ಣ ಪುಟ್ಟ ಅಪರಾಧಗಳಿಗೆ ತಡೆಹಾಕ ಬಹುದು ಎಂದು ತಿಳಿಸಿದರು.
ಗಲಾಟೆ, ದೊಂಬಿ, ರಿಯಲ್ ಎಸ್ಟೆಟ್ ದಂಧೆ, ಅಹಿತಕರ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ವಹಿಸಲಾಗುವುದು. ಇನ್ನು ರೌಡಿಶೀಟರ್‌ಗಳ ಚಲನ-ವಲನಗಳ ಮೇಲೆ ನಿರಂತರ ನಿಗಾ ವಹಿಸಿ ಕಾನೂನು-ಸುವ್ಯವಸ್ಥೆ ಕಾಪಾಡಲಾಗುವುದು. ಅಪರಾಧ ತಡೆ ಮತ್ತು ಪತ್ತೆ ಕಾರ್ಯಕ್ಕೆ ಹೆಚ್ಚು ಒತ್ತು ನೀಡಿ, ತನಿಖಾ ಹಂತದಲ್ಲಿರುವ ಬಾಕಿ ಪ್ರಕರಣಗಳನ್ನು ಇತ್ಯರ್ಥಗೊಳಿಸಿ ನಿರೀಕ್ಷಿತ ಪ್ರಗತಿ ಸಾಧಿಸಿದಲ್ಲಿ ಶೀಘ್ರ ಕಡತಗಳನ್ನು ವಿಲೇವಾರಿ ಮಾಡಲು ಕ್ರಮವಹಿಸಲಾಗುವುದು ಎಂದರು.
ಅನುಪಸ್ಥಿತಿಯಲ್ಲಿಯೇ ಅಧಿಕಾರ!
ನಿರ್ಗಮಿತ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರ ಅನುಪಸ್ಥಿತಿಯಲ್ಲಿಯೇ ಭಾಸ್ಕರ್ ರಾವ್ ಅಧಿಕಾರ ಸ್ವೀಕಾರ ಮಾಡಿದರು.
ಶುಕ್ರವಾರ ಸಂಜೆ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದ ಅವರನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಸ್ವಾಗತಿಸಿದರು. ಬಳಿಕ ಅವರು, ಹಾಜರಿ ಪುಸ್ತಕಕ್ಕೆ ಸಹಿ ಮಾಡುವ ಮೂಲಕ ಏಕಾಂಗಿಯಾಗಿಯೇ ಅಧಿಕಾರ ಸ್ವೀಕರಿಸಿದರು ಎನ್ನಲಾಗಿದೆ.
ಹೆದರಿಕೊಂಡು ಕಚೇರಿಗೆ ಬಂದಿದ್ದೆ!
1977ನೇ ಸಾಲಿನಲ್ಲಿ ಬಿ.ಎನ್.ಗರುಡಾಚಾರ್ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದರು. ಈ ಸಂದರ್ಭದಲ್ಲಿ ಒಮ್ಮೆ ಆಯುಕ್ತರ ಹಳೇ ಕಚೇರಿಗೆ ಭಯಗೊಂಡು ಬಂದಿದ್ದೆ. ಈಗ, ನಾನೇ ಆಯುಕ್ತನಾಗಿದ್ದೇನೆ ಎಂದು ಭಾವನಾತ್ಮಕವಾಗಿ ಹೇಳಿದರು.







