ಮಣಿಪಾಲ: ಡೆಂಗ್, ಮಲೇರಿಯಾ ಜಾಗೃತಿಗೆ ಮರಳುಶಿಲ್ಪ

ಮಣಿಪಾಲ, ಆ.2: ಕರಾವಳಿ ಜಿಲ್ಲೆಗಳ ಜನರಲ್ಲಿ ಆತಂಕವನ್ನು ಹುಟ್ಟಿಸಿರುವ ಡೆಂಗ್ ಹಾಗೂ ಮಲೇರಿಯಾ ರೋಗಗಳ ಕುರಿತು ಜನರಲ್ಲಿ ಅರಿವು ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಣಿಪಾಲದ ಮಣಿಪಾಲ್ ಸ್ಯಾಂಡ್‌ಹಾರ್ಟ್ ಕಲಾವಿದರಾದ ಶ್ರೀನಾಥ್ ಮಣಿಪಾಲ ಹಾಗೂ ರವಿ ಹಿರಿಯಡ್ಕ ಅವರು ಮಣಿಪಾಲದಲ್ಲಿ ಮರಳುಶಿಲ್ಪವನ್ನು ರಚಿಸಿದ್ದಾರೆ.
ಮಳೆಗಾಲದಲ್ಲಿ ಕರಾವಳಿಯ ಜಿಲ್ಲೆಗಳಲ್ಲಿ ಮಹಾಮಾರಿಯಾಗಿ ಕಾಡುವ ಈ ರೋಗಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಸಾಕಷ್ಟು ಪ್ರಯತ್ನ ನಡೆಸುತಿದ್ದರೂ, ಈಗಲೂ ಅದು ನಿಯಂತ್ರಣಕ್ಕೆ ಸಂಪೂರ್ಣ ವಾಗಿ ಸಿಕ್ಕಿಲ್ಲ.
ಸಾರ್ವಜನಿಕರ ಸಹಕಾರ, ಸಹಯೋಗವಿಲ್ಲದೇ ರೋಗ ನಿಯಂತ್ರಣ ಸಾಧ್ಯ ವಿಲ್ಲದ ಕಾರಣ ಇದೀಗ ಜನರಿಗೆ ಅರಿವು ಮೂಡಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತಿದ್ದು, ಈ ದಿಶೆಯಲ್ಲಿ ಸ್ಯಾಂಡ್‌ಹಾರ್ಟ್‌ನ ಕಲಾವಿದರು ಮರಳು ಶಿಲ್ಪದ ಮೂಲಕ ತಮ್ಮ ಪ್ರಯತ್ನ ನಡೆಸಿದ್ದಾರೆ.
ಮನೆಯ ಆವರಣದಲ್ಲಿ ಎಲ್ಲಿಯೂ ನೀರು ನಿಂತು ಡೆಂಗ್ ಹಾಗೂ ಮಲೇರಿಯಾ ಹರಡುವ ಲಾರ್ವದ ಬೆಳವಣಗೆಗೆ ಅವಕಾಶ ಮಾಡಿ ಕೊಡ ಬಾರದು ಎಂದು ಕಲಾವಿದರು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದ್ದಾರೆ.








