ಆ.4ರಂದು ಪಚ್ಚೆವನ ಸಿರಿ ಅಭಿಯಾನ ಉದ್ಘಾಟನೆ
ಉಡುಪಿ, ಆ.2: ಉಡುಪಿಯ ಪ್ರಾಚ್ಯಸಂಚಯ ಸಂಶೋಧನ ಕೇಂದ್ರವು ಪಚ್ಚೆವನ ಭಾರತ ದರ್ಶನ, ಜೈವಿಕ ಪರಿಸರ ಅಧ್ಯಯನ ಮಹಾ ಒಕ್ಕೂಟ ಹಾಗೂ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಇತಿಹಾಸ ವಿಭಾಗದ ಸಹಯೋಗದೊಂದಿಗೆ ಹಸಿರು ವನದತ್ತ ನಮ್ಮ ನಡೆ ‘ಪಚ್ಚೆವನ ಸಿರಿ ಅಭಿಯಾನ’ದ ಉದ್ಘಾಟನೆ ಹಾಗೂ ವಿಚಾರಸಂಕಿರಣ ಆ.4ರಂದು ಉಡುಪಿಯಲ್ಲಿ ನಡೆಯಲಿದೆ.
ನಗರದ ಪೂರ್ಣಪ್ರಜ್ಞ ಕಾಲೇಜಿನ ಒಳಾಂಗಣ ಮಿನಿ ಹಾಲ್‌ನಲ್ಲಿ ಅಪರಾಹ್ನ 2:00ರಿಂದ ಸಂಜೆ 5:00ರವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಪಚ್ಚೆವನ ಭಾರತ ದರ್ಶನ ಪರಿಸರ ಅಧ್ಯಯನದ (ಗ್ರೀನ್ ಇಂಡಿಯಾ ವಿಷನ್ ಎಕಾಲಾಜಿಕಲ್ ಸ್ಟಡೀಸ್) ಮೂಲಕ ವಿನಾಶದಂಚಿನಲ್ಲಿರುವ ವಿವಿಧ ಮರಗಳನ್ನು ಉಳಿಸಿ, ಬೆಳೆಸುವ ಪ್ರಯತ್ನ ನಡೆಸಿದ್ದೇವೆ ಎಂದು ಕೇಂದ್ರದ ಸಂಸ್ಥಾಪನಾ ಅಧ್ಯಕ್ಷ ಹಾಗೂ ನಿರ್ದೇಶಕ ಪ್ರೊ.ಎಸ್.ಎ. ಕೃಷ್ಣಯ್ಯ ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಬಾರಿ ನಾವು ವಿನಾಶದಂಚಿನಲ್ಲಿರುವ ಹೆರಿಟೇಜ್ ಟ್ರೀ ‘ಕಾಡು ಹುಳಿ ಮಾವು’ ಮರವನ್ನು ಉಳಿಸುವ ಪ್ರಯತ್ನ ನಡೆಸಲಿದ್ದೇವೆ ಎಂದು ಪ್ರೊ.ಕೃಷ್ಣಯ್ಯ ತಿಳಿಸಿದರು. ಆ.4ರಂದು ಹಸಿರು ಕಲ್ಯಾಣ ಬಾಗಿನ ಸಮರ್ಪಣೆಯ ಸಂಕಲ್ಪ ತೊಡಲಾಗುವುದು ಹಾಗೂ ಪರಿಸರಾಸಕ್ತರಿಗೆ ಸೀಡ್ ಕೋನ್‌ಗಳನ್ನು ವಿತರಿಸಲಾಗುವುದು ಎಂದರು.
ತಮ್ಮ ಸಂಸ್ಥೆ 2018ರಿಂದ ಕೈಗೊಂಡಿರುವ ಹಸಿರು ಕಲ್ಯಾಣ ಕಾರ್ಯಕ್ರಮ ಜಾಗತಿಕ ತಾಪಮಾನ ಕಡಿಮೆ ಮಾಡಲು ನಡೆಸುತ್ತಿರುವ ಕಿರು ಪ್ರಯತ್ನ ಎಂದವರು ನುಡಿದರು. ಇದೇ ಸಂದರ್ಭದಲ್ಲಿ ವಿನಾಶದಂಚಿಗೆ ಸಂದಿರುವ ಶ್ರೀತಾಳದ ಬೀಜಗಳನ್ನು ಆಸಕ್ತರಿಗೆ ವಿತರಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಸಂಸ್ಥೆಯ ಶ್ರೀಧರ ಭಟ್ ಕಲ್ಯಾಣಪುರ ಹಾಗೂ ರುಕ್ಮಿಣಿ ಹಂಡೆ ಉಪಸ್ಥಿತರಿದ್ದರು.







