ಟಾಪರ್ ಆದರೂ ದಲಿತ ವಿದ್ಯಾರ್ಥಿಗೆ ಸಿಗದ ವಿವಿ ಪ್ರವೇಶಾತಿ
ಹೈಕೋರ್ಟ್ ಮೆಟ್ಟಿಲೇರಲು ಮುಂದಾದ ಚಂದ್ರನ್

Photo: thenewsminute.com
ಚೆನ್ನೈ, ಆ.2: ತಮಿಳುನಾಡು ವೆಟರ್ನರಿ ಆ್ಯಂಡ್ ಅನಿಮಲ್ ಸಯನ್ಸಸ್ ಯುನಿವರ್ಸಿಟಿಯ ಪ್ರವೇಶಾತಿಗಾಗಿ ರ್ಯಾಂಕ್ ಪಟ್ಟಿ ಪ್ರಕಟಗೊಂಡಾಗ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಪೈಕಿ ಮೊದಲ ರ್ಯಾಂಕ್ ಪಡೆದಿದ್ದ ಯು. ಚಂದ್ರನ್ ಸಂತೋಷಪಟ್ಟಿದ್ದ. ಆದರೆ ಎಸ್ಟಿ ವಿಭಾಗದಲ್ಲಿ ಟಾಪರ್ ಆಗಿರುವ ಹೊರತಾಗಿಯೂ ಪ್ರವೇಶಾತಿಗಾಗಿ ಆತನಿಗೆ ವಿಶ್ವವಿದ್ಯಾಲಯದಿಂದ ಕರೆ ಬಾರದೇ ಇದ್ದುದರಿಂದ ಈ ವಿವಿಗೆ ಪ್ರವೇಶಾತಿ ಪಡೆಯುವ ಆತನ ಕನಸು ನುಚ್ಚುನೂರಾಗಿದೆ.
ಹನ್ನೆರಡನೇ ತರಗತಿಯಲ್ಲಿ ವೊಕೇಶನಲ್ ವಿಭಾಗ ಆಯ್ದುಕೊಂಡಿದ್ದ ಆತ ತನಗೇಕೆ ಪ್ರವೇಶ ದೊರಕಿಲ್ಲ ಎಂದು ವಿಚಾರಿಸಿದಾಗ ಬ್ಯಾಚಲರ್ ಆಫ್ ವೆಟರ್ನರಿ ಸಯನ್ಸ್ ಕೋರ್ಸಿಗೆ ಲಭ್ಯ 360 ಸೀಟುಗಳ ಪೈಕಿ 11 ಹಾಗೂ 12ನೇ ತರಗತಿಗಳಲ್ಲಿ ವೊಕೇಶನಲ್ ವಿಭಾಗ ಆಯ್ದುಕೊಂಡವರಿಗೆ ಕೇವಲ ಶೇ. 5 ಮೀಸಲಾತಿ ನೀಡಲಾಗಿದೆಯೆಂದು ತಿಳಿದು ಬಂದಿತ್ತು. ಅಂದರೆ ಒಟ್ಟು ಸೀಟುಗಳ ಪೈಕಿ ಕೇವಲ 18 ಸೀಟುಗಳು ಈ ವಿದ್ಯಾರ್ಥಿಗಳಿಗೆ ಲಭ್ಯ, ಈ 18 ಸೀಟುಗಳ ಪೈಕಿ ತಮಿಳುನಾಡಿನ ಮೀಸಲಾತಿ ಕೋಟಾದಡಿ ಕೂಡ ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕಿದೆ.
ವಿಶ್ವವಿದ್ಯಾಲಯದ ಒಟ್ಟು ಸೀಟುಗಳ ಪೈಕಿ ಶೇ 26.5ರಷ್ಟು ಹಿಂದುಳಿದ ವರ್ಗಗಳು, ಶೇ 3.5ರಷ್ಟು ಹಿಂದುಳಿದ ವರ್ಗ ( ಮುಸ್ಲಿಂ), ಶೇ 20ರಷ್ಟು ಅತಿ ಹಿಂದುಳಿದ ವರ್ಗ, ಶೇ 15, ಪರಿಶಿಷ್ಟ ಜಾತಿ, ಶೇ 3 ಪರಿಶಿಷ್ಟ ಜಾತಿ- ಅರುಂತತಿಯರ್ ಹಾಗೂ ಶೇ 1ರಷ್ಟು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿಯಿದೆ.
ಇದನ್ನು ಗಣನೆಗೆ ತೆಗೆದಕೊಂಡರೆ ವೊಕೇಶನಲ್ ವಿಭಾಗದ 18 ವಿದ್ಯಾರ್ಥಿಗಳ ಪೈಕಿ ಶೇ 0.18ರಷ್ಟು ಸೀಟುಗಳು ಪರಿಶಿಷ್ಟ ಪಂಗಡಕ್ಕೆ ಲಭ್ಯ. ಇದೇ ಕಾರಣಕ್ಕೆ ಚಂದ್ರನ್ ಗೆ ಸೀಟು ದೊರಕಿರಲಿಲ್ಲ.
ಚಂದ್ರನ್ ಈಗಾಗಲೇ ಈರೋಡ್ ಜಿಲ್ಲಾ ಕಲೆಕ್ಟರ್ ಗೆ ದೂರು ನೀಡಿದ್ದಾನೆ. ರಾಜ್ಯ ಮಾನವ ಹಕ್ಕುಗಳ ಆಯೋಗ ಕೂಡ ಸ್ವಯಂಪ್ರೇರಣೆಯಿಂದ ಈ ಪ್ರಕರಣ ಕೈಗೆತ್ತಿಕೊಂಡಿದ್ದು, ಅದು ಈಗಾಗಲೇ ವಿವಿ ಉಪಕುಲಪತಿಗಳಿಗೆ ಹಾಗೂ ತಮಿಳುನಾಡು ಪಶುವೈದ್ಯಕೀಯ ಇಲಾಖೆಗೆ ನೋಟಿಸ್ ಜಾರಿಗೊಳಿಸಿದೆ.
ಚಂದ್ರನ್ ಮದ್ರಾಸ್ ಹೈಕೋರ್ಟ್ ಕದ ತಟ್ಟುವ ಕುರಿತಂತೆಯೂ ಯೋಚಿಸುತ್ತಿದ್ದಾನೆ.







