ಆ.7 ರಿಂದ ಮೇಯರ್ ಕಪ್ ಬ್ಯಾಸ್ಕೆಟ್ ಬಾಲ್ ರಾಜ್ಯಮಟ್ಟದ ಪಂದ್ಯಾವಳಿ: ಮೇಯರ್ ಗಂಗಾಂಬಿಕೆ
ಬೆಂಗಳೂರು, ಆ.2: ಬಿಬಿಎಂಪಿ ಮತ್ತು ರಾಜ್ಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆ ಸಹಭಾಗಿತ್ವದಲ್ಲಿ ಆ.7ರಿಂದ ಐದು ದಿನಗಳ ವರೆಗೆ ಜಯನಗರದ ಕೃಷ್ಣರಾವ್ ಪಾರ್ಕ್‌ನಲ್ಲಿ ಮೇಯರ್ ಕಪ್ ಬ್ಯಾಸ್ಕೆಟ್‌ಬಾಲ್ ರಾಜ್ಯಮಟ್ಟದ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಹೇಳಿದರು.
ಶುಕ್ರವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರೀಡೆಗಳನ್ನು ಪ್ರೋತ್ಸಾಹಿಸಿ, ಕ್ರೀಡಾಪಟುಗಳನ್ನು ಉತ್ತೇಜಿಸುವ ಉದ್ದೇಶದಿಂದ ಬಿಬಿಎಂಪಿ ವತಿಯಿಂದ ಪ್ರತಿ ವರ್ಷವೂ ಮೇಯರ್ ಕಪ್ ಆಯೋಜನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬ್ಯಾಸ್ಕೆಟ್‌ಬಾಲ್ ಪಂದ್ಯಾವಳಿಯಲ್ಲಿ ಹಿರಿಯ ಪುರುಷ, ಮಹಿಳೆಯರ ಜೊತೆಗೆ ಕಿರಿಯ (13 ವರ್ಷ ವಯೋಮಿತಿಯೊಳಗಿನ) ಬಾಲಕ, ಬಾಲಕಿಯರ ಪಂದ್ಯಾವಳಿಗಳನ್ನು ಕೂಡಾ ಆಯೋಜಿಸಲಾಗಿದೆ. ಈ ಬಾರಿ ಕಿರಿಯರಿಗೆ ಆದ್ಯತೆ ನೀಡಿರುವುದು ಸಂತಸದ ವಿಷಯವಾಗಿದೆ. ಬ್ಯಾಸ್ಕೆಟ್‌ಬಾಲ್ ಪಂದ್ಯಾವಳಿಯಲ್ಲಿ ದೇಶದ ವಿವಿಧ ರಾಜ್ಯಗಳಿಂದ 64 ತಂಡಗಳು ಭಾಗವಹಿಸುತ್ತಿದ್ದು, ಹಿರಿಯ ಪುರುಷ, ಮಹಿಳೆ ಹಾಗೂ ಕಿರಿಯ ಬಾಲಕ, ಬಾಲಕಿಯರ ತಲಾ 16 ತಂಡಗಳು ಇರುತ್ತವೆ ಎಂದರು.
ಜಯನಗರ ವಾರ್ಡ್ ಕೃಷ್ಣರಾವ್ ಉದ್ಯಾನದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಡಾ.ಶಿವಕುಮಾರ ಸ್ವಾಮೀಜಿಗಳ ಒಳಾಂಗಣ ಬ್ಯಾಡ್ಮಿಂಟನ್ ಕ್ರೀಡಾಂಗಣವನ್ನು ಆಗಸ್ಟ್ 9ರಂದು ಸಿಎಂ ಯಡಿಯೂರಪ್ಪ ಉದ್ಘಾಟಿಸಲಿದ್ದು, ಆಗಸ್ಟ್ 9ರಿಂದ ಆಗಸ್ಟ್ 11ರವರೆಗೆ ಮೂರು ದಿನಗಳ ಕಾಲ ಕ್ರಿಯೇಟಿವ್ ಸ್ಪೋರ್ಟ್ಸ್ ಅಕಾಡೆಮಿ, ಪ್ರೀಮಿಯರ್ ಲೀಗ್ ಅಕಾಡೆಮಿಯ ಸಹಭಾಗಿತ್ವದಲ್ಲಿ ಮೇಯರ್ ಕಪ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಆಡಳಿತ ಪಕ್ಷದ ನಾಯಕರು, ಆಡಳಿತ ಹಾಗೂ ಜೆಡಿಎಸ್ ಪಕ್ಷದ ನಾಯಕರುಗಳು, ಆಯುಕ್ತರು, ಬ್ಯಾಸ್ಕೆಟ್‌ಬಾಲ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷರು ಉಪಸ್ಥಿತರಿದ್ದರು.