ಮಂಗಳೂರು: ಬಿಜೆಪಿ ಸರಕಾರದ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ

ಮಂಗಳೂರು, ಆ.2: ಟಿಪ್ಪು ಜಯಂತಿಯ ರದ್ಧತಿ, ಸಂಘಪರಿವಾರ ಮತ್ತು ಬಿಜೆಪಿಯ 2 ಸಾವಿರಕ್ಕೂ ಅಧಿಕ ಕಾರ್ಯಕರ್ತರ ಮೇಲಿದ್ದ ಕ್ರಿಮಿನಲ್ ಪ್ರಕರಣಗಳ ರದ್ಧತಿ ಸಹಿತ ರಾಜ್ಯ ಬಿಜೆಪಿ ಸರಕಾರದ ದ್ವೇಷ ರಾಜಕೀಯದ ವಿರುದ್ಧ ಎಸ್‌ಡಿಪಿಐ ದ.ಕ.ಜಿಲ್ಲಾ ಸಮಿತಿ ಶುಕ್ರವಾರ ದ.ಕ.ಜಿಲ್ಲಾಧಿಕಾರಿಯ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿತು.
ಈ ಸಂದರ್ಭ ಎಸ್‌ಡಿಪಿಐ ದ.ಕ.ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಮಾತನಾಡಿ ಟಿಪ್ಪು ಜಯಂತಿ ಆಚರಿಸಬೇಕು ಎಂಬ ಬೇಡಿಕೆಯನ್ನು ಮುಸ್ಲಿಂ ಸಮುದಾಯ ಕೇಳಿರಲಿಲ್ಲ. ಆದರೆ ಕಾಂಗ್ರೆಸ್ ಸರಕಾರ ಟಿಪ್ಪು ಜಯಂತಿಯನ್ನು ಜಾರಿಗೊಳಿಸಿತು. ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಅಧಿಕಾರಕ್ಕೇರಿದ ವೇಳೆ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಇದೀಗ ದ್ವೇಷದ ರಾಜಕೀಯವನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ. ಟಿಪ್ಪು ಜಯಂತಿಯನ್ನು ರದ್ದುಗೊಳಿಸುವ ಮೂಲಕ ಅವಿವೇಕಿತನ ಪ್ರದರ್ಶಿಸಿದ್ದಾರೆ. ಇದನ್ನು ಎಂದಿಗೂ ಸಹಿಸಲು ಸಾಧ್ಯವಿಲ್ಲ. ಇದರ ವಿರುದ್ಧ ಜನಾಂದೋಲನ ಮತ್ತು ಕಾನೂನು ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಸಂಘ ಪರಿವಾರ ಮತ್ತು ಬಿಜೆಪಿಯ 2 ಸಾವಿರಕ್ಕೂ ಅಧಿಕ ಕಾರ್ಯಕರ್ತರ ಮೇಲಿನ ಕ್ರಿಮಿನಲ್ ಕೇಸು ವಾಪಸ್ ಪಡೆದಿರುವುದು ಕೂಡ ಖಂಡನೀಯ. ಮತೀಯವಾದ, ಕೊಲೆ, ಗಲಭೆ ಆರೋಪಿಗಳಿಗೆ ಸರಕಾರ ಬೆನ್ನೆಲುಬಾಗಿ ನಿಂತರೆ ರಾಜ್ಯದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದತೆಯನ್ನು ಉಳಿಸಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ ಅವರು ಪ್ರತಿಪಕ್ಷ ಸ್ಥಾನದಲ್ಲಿದ್ದಾಗ ಜಿಂದಾಲ್‌ಗೆ ಅಕ್ರಮ ಭೂಮಿ ನೀಡಿರುವುದರ ವಿರುದ್ಧ ಆರ್ಭಟಿಸುತ್ತಿದ್ದ ಬಿಜೆಪಿಗರು ಈಗ ವೌನ ತಾಳಿರುವುದು ಯಾಕೆ? ಆಡಳಿತ ವ್ಯವಸ್ಥೆಯನ್ನು ಕ್ರಿಯಾತ್ಮಕಗೊಳಿಸುವ ಬದಲು ಕೋಮುಸೂಕ್ಷ್ಮ ವಿಚಾರಕ್ಕೆ ಆದ್ಯತೆ ನೀಡುತ್ತಿರುವುದು ಅಕ್ಷಮ್ಯ ಎಂದರು.
ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಮುಖಂಡರಾದ ಅಕ್ರಂ ಹಸನ್, ಜಲೀಲ್ ಕೃಷ್ಣಾಪುರ, ಇಕ್ಬಾಲ್ ಬೆಳ್ಳಾರೆ, ಅಶ್ರಫ್ ಮಂಚಿ, ಇಸ್ಮಾಯೀಲ್ ಶಾಫಿ ಬಬ್ಬುಕಟ್ಟೆ, ನೂರುಲ್ಲಾ ಕುಳಾಯಿ, ಮುನೀಬ್ ಬೆಂಗರೆ ಮತ್ತಿತರರು ಪಾಲ್ಗೊಂಡಿದ್ದರು.








