ನಕಲಿ ದಾಖಲೆಗಳನ್ನು ಹೊಂದಿದ್ದ ಭಾರತೀಯನ ಬಂಧನ: ಪಾಕ್

ಇಸ್ಲಾಮಾಬಾದ್, ಆ. 2: ಪಾಕಿಸ್ತಾನದ ಪಂಜಾಬ್ ರಾಜ್ಯದ ಗುಜ್ರನ್‌ವಾಲಾ ನಗರದಲ್ಲಿ ಕಳೆದ 10 ವರ್ಷಗಳಿಂದ ನಕಲಿ ಪಾಸ್‌ಪೋರ್ಟ್ ಮತ್ತು ದಾಖಲೆಗಳ ಆಧಾರದಲ್ಲಿ ವಾಸಿಸುತ್ತಿದ್ದ ಭಾರತೀಯ ನಾಗರಿಕನನ್ನು ಬಂಧಿಸಿರುವುದಾಗಿ ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಶನ್ ಏಜನ್ಸಿ (ಎಫ್‌ಐಎ) ಹೇಳಿದೆ.
ಭಾರತೀಯ ಪಂಜಮ್ ತಿವಾರಿಗೆ ಆಶ್ರಯ ನೀಡಿರುವ ಸ್ಥಳೀಯ ವ್ಯಕ್ತಿಯೊಬ್ಬನ ವಿರುದ್ಧವೂ ಏಜನ್ಸಿ ಮೊಕದ್ದಮೆ ದಾಖಲಿಸಿದೆ ಎಂದು ‘ಡಾನ್’ ಪತ್ರಿಕೆ ಶುಕ್ರವಾರ ವರದಿ ಮಾಡಿದೆ.
ತಿವಾರಿಯು 2009ರಲ್ಲಿ ದುಬೈಗೆ ಕೆಲಸಕ್ಕಾಗಿ ಹೋಗಿದ್ದರು ಹಾಗೂ ಅಲ್ಲಿ ಅವರು ಗುಜ್ರಾನ್‌ವಾಲಾದ ಕಮ್ರಾನ್‌ರನ್ನು ಭೇಟಿಯಾದರು ಎಂದು ಎಫ್‌ಐಎ ಉಪ ನಿರ್ದೇಶಕ ಅಮೀರ್ ನವಾಝ್ ಪತ್ರಿಕೆಗೆ ತಿಳಿಸಿದರು.
ಇಬ್ಬರೂ ದುಬೈಯಲ್ಲಿ ವ್ಯಾಪಾರ ಪಾಲುದಾರರಾದರು ಹಾಗೂ ಸ್ವಲ್ಪ ಸಮಯದ ಬಳಿಕ ಕಮ್ರಾನ್, ತಿವಾರಿಯನ್ನು ನಕಲಿ ಪಾಸ್‌ಪೋರ್ಟ್‌ನಲ್ಲಿ ಪಾಕಿಸ್ತಾನಕ್ಕೆ ಕರೆತಂದರು. ಅಲ್ಲಿ ತಿವಾರಿ ಕಮ್ರಾನ್‌ರ ಸಹೋದರಿ ರುಖ್ಸಾನಾರನ್ನು ಮದುವೆಯಾದರು ಹಾಗೂ ಇಸ್ಲಾಮ್‌ಗೆ ಮತಾಂತರ ಹೊಂದಿದರು. ನಂತರ ಅವರು ತನ್ನ ಹೆಸರನ್ನು ಬಿಲಾಲ್ ಎಂದು ಬದಲಾಯಿಸಿದರು ಎಂದು ವರದಿ ತಿಳಿಸಿದೆ.
ಅವರು ಜನನ ಪ್ರಮಾಣಪತ್ರ, ಕಂಪ್ಯೂಟರೀಕೃತ ರಾಷ್ಟ್ರೀಯ ಗುರುತು ಪತ್ರ, ಮದುವೆ ಒಪ್ಪಂದ ಮುಂತಾದ ನಕಲಿ ದಾಖಲೆಗಳನ್ನು ತಯಾರಿಸಿದರು ಹಾಗೂ ಪಾಕಿಸ್ತಾನದಲ್ಲಿ ವಾಸಿಸಲು ಆರಂಭಿಸಿದರು ಎಂದು ಎಫ್‌ಐಎ ಅಧಿಕಾರಿ ತಿಳಿಸಿದರು.







