ಕಾಂಗ್ರೆಸ್ ಪಕ್ಷವೇ ಹಿಂದುತ್ವದ ಭೂತ ಹುಟ್ಟಿಕೊಳ್ಳಲು ಪ್ರಮುಖ ಕಾರಣ: ಡಾ.ಆನಂದ್ ತೆಲ್ತುಂಬ್ಡೆ
"ದೇಶದಲ್ಲಿ ಕ್ರೂರ ಫ್ಯಾಶಿಸಂ ಬೆಳೆಯಲು ಧರ್ಮ ಸಹಕಾರಿಯಾಗಿದೆ"

ಬೆಂಗಳೂರು, ಆ.3: ಬ್ರಾಹ್ಮಣಶಾಹಿಯ ಅಡಿಪಾಯದ ಮೇಲೆ ಬೆಳೆದುಬಂದಿರುವ ಅತ್ಯಂತ ಕ್ರೂರವಾದ ಫ್ಯಾಶಿಸಂ ಅನ್ನು ಭಾರತದಲ್ಲಿ ಎದುರಿಸುತ್ತಿದ್ದೇವೆ ಎಂದು ಚಿಂತಕ ಹಾಗೂ ಹೋರಾಟಗಾರ ಡಾ.ಆನಂದ್ ತೇಲ್ತುಂಬ್ಡೆ ಆತಂಕ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದ ಪುರಭವನದಲ್ಲಿ ಫ್ಯಾಶಿಸ್ಟ್ ವಿರೋಧಿ ಜನತೆಯ ರಂಗದ ವತಿಯಿಂದ ಆಯೋಜಿಸಿದ್ದ ಕಾರ್ಪೋರೇಟ್ ಮನುವಾದಿ ಫ್ಯಾಶಿಸಂ ಕುರಿತ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮ ದೇಶದಲ್ಲಿ ಫ್ಯಾಶಿಸಂ ಹುಟ್ಟಲು ಬ್ರಾಹ್ಮಣಶಾಹಿ ಸಿದ್ಧಾಂತವು ಬುನಾದಿ ಹಾಕಿಕೊಟ್ಟಿದೆ. ಧರ್ಮ ಹಾಗೂ ಉಜ್ವಲ ಐತಿಹಾಸಿಕ ಪರಂಪರೆ ನಮ್ಮ ದೇಶದ ಫ್ಯಾಶಿಸಂ ಬೆಳೆಯಲೂ ಪ್ರತ್ಯಕ್ಷ ಹಾಗೂ ಪರೋಕ್ಷ ಸಹಾಯ ಮಾಡಿದ್ದರೆ, ಬ್ರಾಹ್ಮಣಶಾಹಿಯು ನೀಡಿರುವ ಪುಷ್ಟಿ ಇಡೀ ವಿಶ್ವದಲ್ಲಿನ ಯಾವುದೇ ಫ್ಯಾಶಿಸ್ಟ್ ಶಕ್ತಿಗಳಿಗೆ ಸಿಗದಂತಹ ಶಕ್ತಿ ನೀಡಿದೆ. ಇದು ಇಂದು ಅತ್ಯಂತ ಭಯಂಕರವಾಗಿ ಬೆಳೆದಿರುವುದು ಆತಂಕದ ಬೆಳವಣಿಗೆ ಎಂದು ಹೇಳಿದರು.
ಸರ್ವಾಧಿಕಾರ, ರಾಷ್ಟ್ರೀಯ ಉನ್ಮಾದ, ಸಾಮ್ರಾಜ್ಯವಾದ, ಸೈನ್ಯಾಧಿಕಾರ ಗುಣಲಕ್ಷಣಗಳಿದ್ದರೆ ಅದನ್ನು ಫ್ಯಾಶಿಸಂ ಎನ್ನಬಹುದಾಗಿದೆ. ನಮ್ಮ ದೇಶದಲ್ಲಿಯೂ ಇಂತಹದ್ದೇ ಕುರುಹುಗಳಿವೆ. ಈ ಫ್ಯಾಶಿಸಂ ಬೆಳೆಯಲು ಧರ್ಮವು ಎಲ್ಲ ಹಂತದಲ್ಲಿಯೂ ಸಹಕಾರಿಯಾಗಿದೆ. ಅದಕ್ಕೆ ಆಡಳಿತದಲ್ಲಿರುವವರೂ ನೆರವಾಗುತ್ತಿದ್ದಾರೆ ಎಂದ ಅವರು, ನಮ್ಮ ದೇಶದಲ್ಲಿ ಫ್ಯಾಶಿಸಂನ ಜನಕರು ಹಿಂದೂ ಮಹಾಸಭಾ, ಬ್ರಾಹ್ಮಣ್ಯವಾದ ಹಾಗ ಆರೆಸ್ಸೆಸ್ ಆಗಿದೆ ಎಂದರು.
ವಿಶ್ವದಾದ್ಯಂತ ಇದುವರೆಗೂ ಕಾಣಿಸಿಕೊಂಡಿರುವ ಫ್ಯಾಶಿಸಂ ಯುದ್ಧದ ಸಂದರ್ಭದಲ್ಲಿ ಅತಿ ಹೆಚ್ಚು ಮುನ್ನೆಲೆಗೆ ಬಂದಿದೆ. ಆದರೆ, ಭಾರತದಲ್ಲಿ ಇದಕ್ಕೆ ತದ್ವಿರುದ್ಧವಾಗಿದ್ದು, ಶಾಂತಿಯುತ ಸಂದರ್ಭದಲ್ಲಿ ಫ್ಯಾಶಿಸಂ ಅಧಿಕವಾಗುತ್ತಿದೆ. ಪ್ರಗತಿಪರ ಧ್ವನಿಗಳು, ಪ್ರತಿಭಟನೆಗಳ ಅಲೆಯನ್ನು ಇದು ಕ್ಷೀಣಿಸುವಂತೆ ಮಾಡುತ್ತಿದೆ. ಇದನ್ನು ಸೋಲಿಸಲಾಗದಂತಹ ಸ್ಥಿತಿಗೆ ತಲುಪಿಬಿಟ್ಟಿದ್ದೇವೆ ಎಂದ ಅವರು, ಈ ಹಿಂದಿನ ಐದು ವರ್ಷಗಳಲ್ಲಿ ಹಿಂದೂ ರಾಷ್ಟ್ರ ಕಟ್ಟುವ ತಯಾರಿ ನಡೆಸಿದ್ದು, ಮುಂದಿನ ಐದು ವರ್ಷಗಳಲ್ಲಿ ಅದನ್ನು ಮಾಡಿ ಯಶಸ್ವಿಯಾಗುತ್ತಾರೆ ಎಂದು ಹೇಳಿದರು.
ವಿಶ್ವದ ಹಲವು ಕಡೆಗಳಲ್ಲಿ ಫ್ಯಾಶಿಸಂನ ಬೇರೆ ಇತಿಹಾಸಗಳನ್ನು ನೋಡಿದರೆ ಬಹುಸಂಖ್ಯಾತರನ್ನು ಒಟ್ಟು ಮಾಡಿ, ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡಿಸಿದ್ದಾಗಿದೆ. ಆದರೆ, ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರನ್ನು ಒಟ್ಟುಗೂಡಿಸಿ ಬಹುಸಂಖ್ಯಾತರು ಎಂಬ ಪರಿಕಲ್ಪನೆ ಸೃಷ್ಟಿಸುವಲ್ಲಿ ಇಲ್ಲಿನ ಫ್ಯಾಶಿಸಂನ ಶಕ್ತಿ ಅಡಗಿದೆ. ಅದನ್ನು ವ್ಯವಸ್ಥಿತವಾಗಿ ಇಲ್ಲಿನ ಬ್ರಾಹ್ಮಣ್ಯಶಾಹಿ ಮಾಡುತ್ತಾ ಬರುತ್ತಿದೆ ಎಂದು ನುಡಿದರು.
ಜಗತ್ತಿನಲ್ಲಿ ಅತ್ಯಂತ ಪ್ರಬಲ ಫ್ಯಾಶಿಸ್ಟ್ ಧೋರಣೆಗಳನ್ನು ಅನುಸರಿಸಿದ್ದ ಇಟಲಿಯ ಮುಸಲೋನಿಯನ್ನು ಆರೆಸ್ಸೆಸ್‌ನ ಸ್ಥಾಪಕ ಹೆಗಡೆವಾರ್‌ಗೆ ಗುರುವಾಗಿದ್ದ ಬಿ.ಎಸ್.ಮುಂಝಿ 1930 ರಲ್ಲಿ ಭೇಟಿ ಮಾಡಿದ್ದರು. ಮುಸಲೋನಿ ಕಟ್ಟಿದ್ದ ರೀತಿಯಲ್ಲಿಯೇ ಇಲ್ಲಿ ಆರೆಸ್ಸೆಸ್ ಕಟ್ಟಿ, ಬೆಳೆಸಬೇಕೆಂದು ಹೆಗಡೆವಾರ್‌ಗೆ ಸಲಹೆಯನ್ನೂ ನೀಡಿದ್ದನ್ನು ಇತಿಹಾಸ ದಾಖಲಿಸಿದೆ. ಇಂದಿನ ಫ್ಯಾಶಿಸಂ ಬೆಳೆಯಲು ಅಂದೇ ಬೀಜವನ್ನು ಹಾಕಲಾಗಿದೆ. ಇದನ್ನು ಪ್ರಗತಿಪರರು ಅರ್ಥ ಮಾಡಿಕೊಂಡಾಗಲೇ ಪ್ರತಿತಂತ್ರ ರೂಪಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸ್ವಾತಂತ್ರದ ನಂತರದಲ್ಲಿನ ನಮ್ಮ ದೇಶದ ರಾಜಕಾರಣದಲ್ಲಿ ಧರ್ಮ ಸೇರಿಕೊಳ್ಳದೇ ಇದ್ದಿದ್ದರೆ ಪ್ರಸ್ತುತ ಹಿಂದುತ್ವದ ಭೂತ ಕಾಲಿಡುತ್ತಿರಲಿಲ್ಲ. ನಾವು ಜಾತ್ಯತೀತ ಪಕ್ಷದವರು ಎಂದು ಹೇಳಿಕೊಂಡ ಕಾಂಗ್ರೆಸ್ ಪಕ್ಷವೇ ಹಿಂದುತ್ವದ ಭೂತ ಹುಟ್ಟಿಕೊಳ್ಳಲು ಪ್ರಮುಖ ಕಾರಣವಾಗಿದೆ. ಅನಂತರದ ಇದೇ ಪಕ್ಷದ ನವ ಉದಾರವಾದಿ ನೀತಿಗಳಿಂದಲೂ ದೇಶದೊಳಗೆ ಬಿಜೆಪಿ ಹಾಗೂ ಅದರ ಅಂಗ ಸಂಘಟನೆಗಳು ಬೆಳೆಯಲು ಮೂಲ ಕಾರಣವಾಗಿದೆ ಎಂದು ತಿಳಿಸಿದರು.
ಭಾರತದಲ್ಲಿ ಬಹುಸಂಖ್ಯಾತರಿಗೆ ಹಿಂದುತ್ವ ಬೇಕಾಗಿದೆ. ಆದರೆ, ಅದರ ಹೆಸರಿನಲ್ಲಿ ಅಧಿಕಾರ ನಡೆಸುತ್ತಿರುವವರು ಜಾರಿಗೆ ತರುವ ನೀತಿಗಳು ಸಾಮಾನ್ಯರ ಬದುಕನ್ನೇ ಕಸಿದುಕೊಳ್ಳುತ್ತಿವೆ. ಇನ್ನೊಂದು ಕಡೆ ಬಂಡವಾಳಶಾಹಿಗಳು ಲಾಭ ಮಾಡಿಕೊಳ್ಳಬೇಕಿದೆ. ಆದರೆ, ಅವರಿಗೆ ಹಿಂದುತ್ವದ ಅಗತ್ಯವಿಲ್ಲ. ಹೀಗಾಗಿ, ಕಾರ್ಪೋರೇಟ್‌ಗಳಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಆಳುವ ವರ್ಗ ಕೆಲಸ ಮಾಡುತ್ತಿದ್ದು, ಅದಕ್ಕಾಗಿ ವ್ಯವಸ್ಥಿತವಾಗಿ ಸಂವಿಧಾನದಲ್ಲಿರುವ ಅಂಶಗಳನ್ನೇ ಬದಲಿಸಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಫ್ಯಾಶಿಸಂನ ಬಗ್ಗೆ ಭ್ರಮೆಯಲ್ಲಿ ಇರುವುದರ ಬದಲಿಗೆ ವಾಸ್ತವಕ್ಕೆ ಬರಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಫ್ಯಾಶಿಸ್ಟ್ ವಿರೋಧಿ ಜನತೆಯ ರಂಗ ಬಾಲನ್ ಸೇರಿದಂತೆ ಹಲವರಿದ್ದರು.







