ನನಗೆ ಕೆಲಸ ಮಾಡಲು ಬಿಡಲಿಲ್ಲ: ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ
ಬೆಂಗಳೂರು, ಆ.3: ಜನರಿಂದ ಆಯ್ಕೆಯಾಗಿ ಶಾಸಕನಾದ ನನಗೆ ಕೆಲಸ ಮಾಡಲು ಬಿಡಲಿಲ್ಲ. ಪದವಿ ಅಥವಾ ಹಣದ ಆಸೆಗಾಗಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಕ್ಷೇತ್ರದಲ್ಲಿ ನನಗೆ ಆದ ನೋವಿನಿಂದಾಗಿ ಈ ತೀರ್ಮಾನ ಕೈಗೊಳ್ಳಬೇಕಾಯಿತು ಎಂದು ಕೆ.ಆರ್.ಪೇಟೆ ಕ್ಷೇತ್ರದ ಜೆಡಿಎಸ್ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ತಿಳಿಸಿದರು.
ಶನಿವಾರ ನಗರದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿರುವ ಸೆವೆನ್ ಮಿನಿಸ್ಟರ್ ಹೌಸ್‌ನಲ್ಲಿರುವ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ವಿಧಾನಸಭೆಯ ಅಧಿವೇಶನ ಆರಂಭವಾಗುವ ಮುನ್ನವೇ ನಾವು ನಮ್ಮ ಶಾಸಕ ಸ್ಥಾನಕ್ಕೆ ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದೇವೆ. ಆದರೂ, ಸ್ಪೀಕರ್ ನಮ್ಮನ್ನು ಶಾಸಕ ಸ್ಥಾನದಿಂದ ಅನರ್ಹ ಮಾಡಿದ್ದು ನೋವು ತಂದಿದೆ. ನಮಗೆ ಸುಪ್ರೀಂಕೋರ್ಟ್ ಮೇಲೆ ವಿಶ್ವಾಸವಿದ್ದು, ನಮ್ಮ ಪರವಾಗಿ ತೀರ್ಪು ಬರಲಿದೆ ಎಂದು ಅವರು ಹೇಳಿದರು.
ಜೆಡಿಎಸ್ ಪಕ್ಷದಿಂದ ನನ್ನನ್ನು ಉಚ್ಛಾಟಿಸಲಾಗಿದೆ. ಮುಂದೆ ಯಾವ ಪಕ್ಷಕ್ಕೆ ಹೋಗಬೇಕು ಎಂಬುದನ್ನು ತೀರ್ಮಾನಿಸಿಲ್ಲ. ಬಿಜೆಪಿ ಸೇರುವಂತೆ ನಮಗೆ ಯಾವ ಆಹ್ವಾನವೂ ಬಂದಿಲ್ಲ. ಕ್ಷೇತ್ರದಲ್ಲಿನ ನಮ್ಮ ಕಾರ್ಯಕರ್ತರನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ನಾರಾಯಣಗೌಡ ಹೇಳಿದರು.
ಒಬ್ಬ ಶಾಸಕನಾಗಿ ನಾನು ದೇವೇಗೌಡರ ಮನೆಗೆ ಹೋದರೆ, ಕನಿಷ್ಠ ಒಂದು ಕಪ್ ಟೀ ಕೂಡ ನಮಗೆ ಕೊಡುವುದಿಲ್ಲ. ಕೆ.ಆರ್.ಪೇಟೆ ಕ್ಷೇತ್ರದಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಯಾರನ್ನು ಬೇಕಾದರೂ ಅಭ್ಯರ್ಥಿಯನ್ನಾಗಿ ಅವರು ಕಣಕ್ಕಿಳಿಸಲಿ, ನಾನು ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅವರು ತಿಳಿಸಿದರು.
ಹೊಸಕೋಟೆ ಕ್ಷೇತ್ರದ ಕಾಂಗ್ರೆಸ್ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಮಾತನಾಡಿ, ಸಮ್ಮಿಶ್ರ ಸರಕಾರದಲ್ಲಿ ನಮ್ಮ ಕ್ಷೇತ್ರದ ಕೆಲಸಗಳು ಆಗುತ್ತಿರಲಿಲ್ಲ. ಜನರ ಕೆಲಸ ಮಾಡಲು ಸಾಧ್ಯವಿಲ್ಲದಿದ್ದರೆ ಶಾಸಕರಾಗಿ ನಾವು ಯಾಕೆ ಅಧಿಕಾರದಲ್ಲಿರಬೇಕು. ಹಾಗಾಗಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದರು.
ಹಣ, ಅಧಿಕಾರದ ಆಸೆಗಾಗಿ ನಾನು ಹೋಗಿಲ್ಲ. ನನಗೆ ಅದರ ಅವಶ್ಯಕತೆಯೂ ಇಲ್ಲ. ದೇವರು ನನಗೆ ಸಾಕಷ್ಟು ಕೊಟ್ಟಿದ್ದಾನೆ. ನಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿರುವ ಸ್ಪೀಕರ್ ಕ್ರಮ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಹಾಕಿದ್ದೇವೆ. ಅಲ್ಲಿ ವಿಚಾರಣೆ ನಡೆದು, ತೀರ್ಪು ಬಂದ ಬಳಿಕ ನಮ್ಮ ಮುಂದಿನ ನಡೆ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ನಾಗರಾಜ್ ಹೇಳಿದರು.
ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಎದುರಾಗುವ ಉಪ ಚುನಾವಣೆಯಲ್ಲಿ ನಾನೇ ನಿಲ್ಲಬೇಕಾ? ಅಥವಾ ನನ್ನ ಮಗನನ್ನು ನಿಲ್ಲಿಸಬೇಕಾ? ಎಂಬುದರ ಕುರಿತು ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಪಡೆದ ಬಳಿಕ ನಿರ್ಧರಿಸುತ್ತೇನೆ ಎಂದು ಅವರು ಹೇಳಿದರು.