ಆ.15ರಂದು ಕ್ಮಾಡಿ ಚರ್ಚ್‌ನಲ್ಲಿ ವಾರ್ಷಿಕ ಮಹಾ ಹಬ್ಬ
ಉಡುಪಿ, ಆ. 3: ರಾಜ್ಯದ ಮೊಟ್ಟ ಮೊದಲದ ಹಡಗಿನ ಆಕಾರದ ಕಲ್ಮಾಡಿ ಸ್ಟೆಲ್ಲಾ ಮಾರಿಸ್ ದೇವಾಲಯದಲ್ಲಿ ವೆಲಂಕಣಿ ಮಾತೆಯ ಪ್ರತಿಷ್ಠಾಪನೊತ್ಸವ ಆ.15ರಂದು ಜರಗಲಿದೆ ಎಂದು ದೇವಾಲಯದ ಪ್ರಧಾನ ಧರ್ಮಗುರು ವಂದನೀಯ ಫಾ.ಆಲ್ಬನ್ ಡಿಸೋಜ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.6ರಿಂದ ಆ.14ರವರೆಗೆ ಉತ್ಸವದ ಪೂರ್ವಭಾವಿಯಾಗಿ ನೊವೆನಾ ಪ್ರಾರ್ಥನೆ ಗಳು ಮತ್ತು ಬಲಿಪೂಜೆಗಳು ನಡೆಯಲಿವೆ. ನೊವೆನಾಗೆ ಆ.6ರಂದು ಅಪರಾಹ್ನ 3:45ಕ್ಕೆ ಮಂಗಳೂರು ಸಂತ ಜೋಸೆಫ್ ಸೆಮಿನರಿಯ ರೆಕ್ಟರ್ ಫಾ.ರೊನಾಲ್ಡ್ ಸೆರಾವೊ ಚಾಲನೆ ನೀಡಲಿರುವರು.
ಆ.14ರಂದುಮಧ್ಯಾಹ್ನ 2:45ಕ್ಕೆ ಆದಿಉಡುಪಿ ಜಂಕ್ಷನ್‌ನಿಂದ ಚರ್ಚ್‌ವರೆಗೆ ನಡೆಯುವ ಮಾತೆಯ ತೇರಿನ ಮೆರವಣಿಗೆಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಚಾಲನೆ ನೀಡಲಿರುವರು. ಸಂಜೆ 4 ಗಂಟೆಗೆ ಮಂಗಳೂರು ಧರ್ಮ ಪ್ರಾಂತದ ಧರ್ಮಾಧ್ಯಕ್ಷ ಅ.ವಂ.ಡಾ.ಪೀಟರ್ ಪೌಲ್ ಸಲ್ದಾನ ಪ್ರಾರ್ಥನಾ ವಿಧಿ ಮತ್ತು ಬಲಿಪೂಜೆಯನ್ನು ನೆರವೇರಿಸಲಿರುವರು.
ಆ.15ರಂದು ಸಂಜೆ 4 ಗಂಟೆಗೆ ವಾರ್ಷಿಕ ಹಬ್ಬದ ಸಂಭ್ರಮದ ಬಲಿ ಪೂಜೆಯ ನೇತೃತ್ವವನ್ನು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅ.ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ ವಹಿಸಲಿರುವರು. ವಾರ್ಷಿಕ ಮಹಾಹಬ್ಬದ ದಿನ ಬೆಳಿಗ್ಗೆಯಿಂದ ಪ್ರಾರ್ಥನಾ ವಿಧಿಗಳು ಮತ್ತು ಬಲಿಪೂಜೆ ಆರಂಭವಾಗಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಾರ್ಷಿಕ ಮಹಾಹಬ್ಬದ ಉಸ್ತುವಾರಿ ಫಾ.ಪ್ರವೀಣ್ ಮೊಂತೆರೊ, ಪಾಲನಾ ಮಂಡಳಿಯ ಉಪಾಧ್ಯಕ್ಷ ಸಂಜಯ್ ಅಂದ್ರಾದೆ, ಐಸಿವೈಎಂ ಅಧ್ಯಕ್ಷ ಮೆಲ್ವಿನ್ ಕರ್ವಾಲೋ, 18 ಆಯೋಗದ ಸಂಚಾಲಕ ಫ್ರಾನ್ಸಿಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.







