ದೇಶದಲ್ಲಿ ಆರ್ಥಿಕ ಹಿಂಜರಿತ: ಎಚ್‌ಡಿಎಫ್‌ಸಿ ಅಧ್ಯಕ್ಷ ದೀಪಕ್ ಪರೇಖ್ ಕಳವಳ

ಹೊಸದಿಲ್ಲಿ, ಆ.3: ಮನೆ,ನಿವೇಶನ ಖರೀದಿಯಲ್ಲಿ ವಿಶಿಷ್ಟವಾದ ಆರ್ಥಿಕ ಹಿಂಜರಿತವು ಕಂಡುಬಂದಿದೆಯೆಂದು ವಸತಿ ಅಭಿವೃದ್ಧಿ ಹಣಕಾಸು ನಿಗಮ (ಎಚ್‌ಡಿಎಫ್‌ಸಿ)ದ ಅಧ್ಯಕ್ಷ ದೀಪಕ್ ಪರೇಖ್ ಒಪ್ಪಿಕೊಂಡಿದ್ದಾರೆ. ಆದರೆ ನಿವೇಶನ, ಮನೆಗಳಿಗೆ ದೇಶಾದ್ಯಂತ ಸಮರ್ಪಕವಾದ ಬೇಡಿಕೆಯಿದ್ದು, ಈ ಹಿಂಜರಿತವು ತಾತ್ಕಾಲಿಕವಾದುದಾಗಿದೆಯೆಂದು ಅವರು ಹೇಳಿದ್ದಾರೆ.
ಸೆಪ್ಟೆಂಬರ್‌ನಿಂದೀಚೆಗೆ ದೇಶದಲ್ಲಿ ಬಂಡವಾಳ ಹರಿವಿನಲ್ಲಿ ಬಿಗಿಯಾದ ಪರಿಸ್ಥಿತಿಯಿರುವುದೇ ಹಿಂಜರಿತಕ್ಕೆ ಕಾರಣವೆಂದು ಅವರು ಹೇಳಿದ್ದಾರೆ.
ಮುಂಬೈಯಲ್ಲಿ ಶೇರುದಾರರ 42ನೇ ವಾರ್ಷಿಕ ಸಾಮಾನ್ಯಸಭೆಯನ್ನುದ್ದೇಶಿಸಿ ಪರೇಖ್ ಮಾತನಾಡುತ್ತಿದ್ದರು.
ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು ಆಂತರಿಕ ಉತ್ಪನ್ನದ ಬೆಳವಣಿಗೆ ದರವು ಶೇ.6.8ಕ್ಕೆ ಕುಸಿದಿರುವುದು, ಆರ್ಥಿಕ ಹಿಂಜರಿತವನ್ನು ಪ್ರತಿಬಿಂಬಿಸುತ್ತದೆ ಎಂದವರು ಅಭಿಪ್ರಾಯಿಸಿದರು.
ಹಬ್ಬದ ಋತು ಆರಂಭಗೊಂಡ ಬಳಿಕ ಪರಿಸ್ಥಿತಿಯು ಸಹಜತೆಗೆ ಮರಳಲಿದೆ ಎಂಬ ಭರವಸೆಯನ್ನು ಪರೇಖ್ ವ್ಯಕ್ತಪಡಿಸಿದರು. ದೇಶದ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲು ಸಾಲಿಗರಲ್ಲಿ ಆತ್ಮವಿಶ್ವಾಸವನ್ನು ಸ್ಥಾಪಿಸುವುದು ನಿರ್ಣಾಯಕವಾದುದಾಗಿದೆ’’ ಎಂದವರು ತಿಳಿಸಿದರು.
ಭಾರತದ ಜಿಡಿಪಿ ದರವು ಶೇ.6.5ರಷ್ಟು ಬೆಳವಣಿಗೆಯನ್ನು ಸಾಧಿಸಿದರೂ ಅದು ತನ್ನ ಅದೃಷ್ಟವೆಂದು ಭಾರತ ಭಾವಿಸಬೇಕೆಂದು (ಲಾರ್ಸೆನ್ ಆ್ಯಂಡ್ ಟರ್ಬೊದ) ಅಧ್ಯಕ್ಷ ಎ.ಎಂ. ನಾಯ್ಕ್ ಅಭಿಪ್ರಾಯಿಸಿದ ಬೆನ್ನಲ್ಲೇ ದೀಪಕ್ ಪರೇಖ್ ಈ ಹೇಳಿಕೆ ನೀಡಿದ್ದಾರೆ.
ಜನವರಿಯಿಂದ ಮಾರ್ಚ್‌ವರೆಗಿನ ತ್ರೈಮಾಸಿಕದಲ್ಲಿ ದೇಶದ ಅರ್ಥಿಕ ಬೆಳವಣಿಗೆಯು ಐದು ವರ್ಷಗಳಲ್ಲೇ ಕನಿಷ್ಠ ಶೇ.5.8ರಷ್ಟು ಕುಸಿತವನ್ನು ಕಂಡಿತ್ತು. ಕಳೆದ 17 ತ್ರೈಮಾಸಿಕಗಳಲ್ಲೇ ಇದು ಅತ್ಯಂತ ಕನಿಷ್ಠವಾದ ಬೆಳವಣಿಗೆದರವಾಗಿದೆ.







