ಬೆಳಗ್ಗೆ 10ಕ್ಕೆ ಕಚೇರಿಗೆ ಬರಲು ಸಾಧ್ಯವಿಲ್ಲ: ಸಚಿವಾಲಯ ನೌಕರರ ಸಂಘದಿಂದ ಮುಖ್ಯ ಕಾರ್ಯದರ್ಶಿಗೆ ಪತ್ರ

ಸಾಂದರ್ಭಿಕ ಚಿತ್ರ
ಬೆಂಗಳೂರು, ಆ.3: ಸಮಯಕ್ಕೆ ಸರಿಯಾಗಿ ಬೆಳಗ್ಗೆ 10ಕ್ಕೆ ಕಚೇರಿಗೆ ಬರಲು ಸಾಧ್ಯವಿಲ್ಲ. ಹೀಗಾಗಿ ರಿಯಾಯಿತಿ ಕೊಡಬೇಕೆಂದು ರಾಜ್ಯ ಸರಕಾರಿ ಸಚಿವಾಲಯದ ನೌಕರರ ಸಂಘ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಮನವಿ ಮಾಡಿದೆ.
ನಗರದ ಟ್ರಾಫಿಕ್ನಲ್ಲಿ ಬೆಳಗ್ಗೆ 10ಕ್ಕೆ ಕಚೇರಿಗೆ ಬರುವುದು ದೊಡ್ಡ ಸವಾಲಾಗಿದೆ. ದಿನದಲ್ಲಿ ಏಳೂವರೆ ಗಂಟೆ ಕೆಲಸ ಮಾಡಿ ನೌಕರರು ಮಾನಸಿಕ ಖಿನ್ನತೆ ಒಳಗಾಗುತ್ತಿದ್ದಾರೆ. ಇದರ ಜೊತೆಗೆ ಬಯೋಮೆಟ್ರಿಕ್ ಹಾಜರಾತಿಯಿಂದ ನೆಮ್ಮದಿ ಹಾಳಾಗಿದೆ ಎಂದು ರಾಜ್ಯ ಸರಕಾರಿ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸರಕಾರದ ಆಡಳಿತ ಕಚೇರಿಗಳು ಬೆಂಗಳೂರಿನ ಕೇಂದ್ರ ಸ್ಥಾನದಲ್ಲಿದ್ದು, ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ರಸ್ತೆ ಸಂಚಾರದ ದಟ್ಟಣೆಯು ಹೆಚ್ಚಾಗುತ್ತಿದೆ. ಹೀಗಾಗಿ ಕಚೇರಿ ಆರಂಭದ ವೇಳೆಗೆ ವಿಧಾನಸೌಧಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಇದರಿಂದ ನೌಕರರು ಹೆಚ್ಚಿನ ಒತ್ತಡಕ್ಕೆ ಒಳಗಾಗಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿವೆ. ಇದನ್ನು ನಿವಾರಿಸಲು ಬೆಳಗಿನ ಸಮಯದಲ್ಲಿ ರಿಯಾಯಿತಿ ನೀಡಬೇಕೆಂದು ಪತ್ರದಲ್ಲಿ ಮನವಿ ಮಾಡಲಾಗಿದೆ.