ರೈಲಿನಲ್ಲಿ ಮೊಬೈಲ್ ಕಳವು: ಆರೋಪಿ ಬಂಧನ
ಮಣಿಪಾಲ, ಆ.3: ರೈಲಿನಲ್ಲಿ ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿ ಯೊಬ್ಬನನ್ನು ಉಡುಪಿ ರೈಲ್ವೆ ಪೊಲೀಸರು ಆ.2ರಂದು ಮಧ್ಯಾಹ್ನ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆದು ಮಣಿಪಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಅಹ್ಮದ್‌ನಗರ ಜಿಲ್ಲೆಯ ನಾಗ್ಪುರ ನಿವಾಸಿ ಉಮೇಶ್ ಸಿರಂಗ್ ಉನ್ಹಾಕೆ(36) ಬಂಧಿತ ಆರೋಪಿ. ರೈಲ್ವೆ ನಿಲ್ದಾಣದಲ್ಲಿ ಸಂಶಯಾ ಸ್ಪದವಾಗಿ ತಿರುಗಾಡುತ್ತಿದ್ದ ಈತನನ್ನು ರೈಲ್ವೆ ರಕ್ಷಣಾ ದಳದ ಸಿಬ್ಬಂದಿ ವಶಕ್ಕೆ ತೆಗೆದುಕೊಂಡು ಆತನ ಬಳಿ ಇದ್ದ ಬ್ಯಾಗ್‌ನ್ನು ಪರಿಶೀಲನೆ ನಡೆಸಿದರು.
ಆಗ ಅದರಲ್ಲಿ ಎರಡು ಮೊಬೈಲ್ ಪತ್ತೆಯಾಗಿದ್ದು, ಎರಡ ಪೈಕಿ ಐ-ಪೋನ್ ಮೊಬೈಲ್‌ನ್ನು ಆತ ಜು.28ರಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗೋವಾದಿಂದ ತಿರೂರು ಕಡೆಗೆ ಮಂಗಳಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ರಹಮತ ಶಾಮಲಾ ಕೆ.ಪಿ ಎಂಬವರ ಬ್ಯಾಗ್‌ನಿಂದ ಕಳವು ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಉಮೇಶ್ ಸಿರಂಗ್ ಉನ್ಹಾಕೆನನ್ನು ರೈಲ್ವೆ ಪೊಲೀಸರು ಮಣಿಪಾಲ ಪೊಲೀಸರಿಗೆ ಹಸ್ತಾಂತರಿಸಿದ್ದು, ಆತನನ್ನು ಬಂಧಿಸಿದ ಪೊಲೀಸರು ಇಂದು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆತನಿಗೆ ಆ.16ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







