ರೇಡಿಯೋ ಮಣಿಪಾಲದಿಂದ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ
ಉಡುಪಿ, ಆ.3:ರೇಡಿಯೋ ಮಣಿಪಾಲ (90.4ಎಫ್‌ಎಂ) ಸಮುದಾಯ ಬಾನುಲಿ ಕೇಂದ್ರ ಹಾಗೂ ಅಕಾಡೆಮಿ ಆಪ್ ಜನರಲ್ ಎಜ್ಯುಕೇಶನ್ ಮಣಿಪಾಲ ಇದರ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ 4ನೇ ವರ್ಷದ ದೇಶಭಕ್ತಿ ಗೀತೆಗಾಯನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಆ.10ರ ಶನಿವಾರ ಬೆಳಿಗ್ಗೆ 9 ರಿಂದ ಮಣಿಪಾಲದ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಶನ್ (ಎಂಐಸಿ) ಸಂಸ್ಥೆಯ ಆವರಣದಲ್ಲಿ ಈ ಸ್ಪರ್ಧೆ ನಡೆಯಲಿದೆ. ಜಿಲ್ಲೆಯ ಆಸಕ್ತ ಪ್ರೌಢಶಾಲಾ ವಿದ್ಯಾರ್ಥಿ ತಂಡಗಳು ಇದರಲ್ಲಿ ಭಾಗವಹಿಸಬಹುದಾಗಿದೆ.
ಸ್ಪರ್ಧೆಯ ನಿಯಮ: ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಗಳಿಗಾಗಿ ನಡೆಯುವ ಈ ಸ್ಪರ್ಧೆಯಲ್ಲಿ ಪ್ರತಿ ತಂಡದಲ್ಲಿ ಕನಿಷ್ಠ 6 ವಿದ್ಯಾರ್ಥಿಗಳು ಗರಿಷ್ಠ 10 ವಿದ್ಯಾರ್ಥಿಗಳು ಭಾಗವಹಿಸಬಹುದು. ಪ್ರತಿ ತಂಡಕ್ಕೆ ಆರು ನಿಮಿಷ ಗಳ ಅವಕಾಶ ನೀಡಲಾಗುತ್ತದೆ. ಕನ್ನಡ ಅಥವಾ ಹಿಂದಿ ಭಾಷೆಯ ದೇಶಭಕ್ತಿ ಗೀತೆಯನ್ನು ಪ್ರಸ್ತುತ ಪಡಿಸಬಹುದು. ರೇಡಿಯೋ ಮಣಿಪಾಲ ಧ್ವನಿಮುದ್ರಿಸಿ ಕೊಳ್ಳುವ ಅತ್ಯುತ್ತಮ ಗುಣಮಟ್ಟದ ದೇಶಭಕ್ತಿ ಗೀತೆಗಳನ್ನು ಆ.15ರಂದು ರೆೀಡಿಯೋ ಮಣಿಪಾಲ ಪ್ರಸಾರ ಮಾಡಲಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ಶಾಲಾ ತಂಡಗಳು ಆ.9ರೊಳಗೆ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡು ಆ.10ರ ಬೆಳಗ್ಗೆ 9 ಗಂಟೆಗೆ ಸ್ಪರ್ಧಾ ಸ್ಪಳದಲ್ಲಿ ಹಾಜರಿರಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9481753711ನ್ನು ಅಥವಾ -Radio.manipal@manipal.edu- ಸಂಪರ್ಕಿ ಸಬಹುದು ಎಂದು ರೇಡಿಯೊ ಮಣಿಪಾಲ ಪ್ರಕಟಣೆಯಲ್ಲಿ ತಿಳಿಸಿದೆ.







