ಬಿಎಸ್ಪಿ- ಬಿಜೆಪಿ ಅನೈತಿಕ ಮೈತ್ರಿಯಿಂದ ಕಾಂಗ್ರೆಸ್ ಗೆ ಸೋಲು: ಯತೀಂದ್ರ ಸಿದ್ದರಾಮಯ್ಯ

ಮೈಸೂರು, ಆ.3: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಎಸ್ಪಿ ಮತ್ತು ಬಿಜೆಪಿ ಅನೈತಿಕ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಪಕ್ಷವನ್ನು ಸೋಲಿಸಿದರು ಎಂದು ವರುಣಾ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅರೋಪಿಸಿದರು.
ನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಶನಿವಾರ ವರುಣ ವಿಧಾನಸಭಾ ಕ್ಷೇತ್ರದ ವರುಣಾ ಮತ್ತು ತಗಡೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ ಮತದಾರರಿಗೆ ಕೃತಜ್ಞತಾ ಮತ್ತು ಆತ್ಮಾವಲೋಕನ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯದ ಬಹುತೇಕ ಕಡೆ ಬಿಎಸ್ಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಕಾಂಗ್ರೆಸ್ ಪಕ್ಷದ ಮೂಲ ಮತಗಳನ್ನು ತನ್ನತ್ತ ಸೆಳೆಯಿತು. ಇದು ಬಿಜೆಪಿ ಪಕ್ಷದವರಿಗೆ ಹೆಚ್ಚು ಅನುಕೂಲವಾಯಿತು. ಅದೇ ರೀತಿ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಶಿವಕುಮಾರ್ ಎಂಬ ಅಭ್ಯರ್ಥಿಯನ್ನು ಕಣಕ್ಕಿಳಿಸಿ 86 ಸಾವಿರ ಮತಗಳನ್ನು ಪಡೆದು ಆರ್.ಧ್ರುವನಾರಾಯಣ್ ಸೋಲಿಗೆ ಕಾರಣರಾದರು ಎಂದು ಜರಿದರು.
ಕೋಮುವಾದಿಗಳ ವಿರೋಧಿ ಎಂದು ಹೇಳಿಕೊಳ್ಳು ಬಿಎಸ್ಪಿಯವರು ಈ ಬಾರಿ ಮಾಡಿದ್ದೇನು ಎಂದು ಖಾರವಾಗಿ ಪ್ರಶ್ನಿಸಿದ ಅವರು, ಬಿಸ್ಪಿ ಪಕ್ಷದಿಂದ ಆಯ್ಕೆಯಾಗಿದ್ದ ಏಕೈಕ ಶಾಸಕ ಎನ್.ಮಹೇಶ್ ಬಹುಮತ ಸಾಬೀತು ಪಡಿಸುವ ವೇಳೆ ಸದನಕ್ಕೆ ಗೈರಾಗುವ ಮೂಲಕ ಬಿಜೆಪಿಗೆ ಪರೋಕ್ಷವಾಗಿ ಬೆಂಬಲ ನೀಡಿದರು ಎಂದು ಕಿಡಿಕಾರಿದರು.
ಕ್ಷೇತ್ರವನ್ನು ಸಾಕಷ್ಟು ಅಭಿವೃದ್ದಿ ಮಾಡಿ ಅಭಿವೃದ್ದಿಯ ಹರಿಕಾರ ಎಂದೇ ಹೆಸರು ಗಳಿಸಿದ ಮಾಜಿ ಸಂಸದ ಆರ್.ಧ್ರುವನಾರಾಯಣ್ ಅವರ ಸೋಲು ಕಾಂಗ್ರೆಸ್ ಪಕ್ಷಕ್ಕೆ ಮತ್ತು ಕಾರ್ಯಕರ್ತರಿಗೆ ನಷ್ಟ.
-ಎಸ್.ಸಿ.ಬಸವರಾಜು, ವಾಲ್ಮೀಕಿ ಅಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ







