ಪೃಥ್ವಿ ಶಾ ಅಮಾನತು ಶಿಕ್ಷೆ ಕ್ರೂರ
ದಿಲಿಪ್ ವೆಂಗ್‌ಸರ್ಕಾರ್

ಮುಂಬೈ, ಆ.3: ನಿಷೇಧಿತ ಉದ್ದೀಪನಾ ಮದ್ದು ಸೇವಿಸಿರುವುದಕ್ಕೆ ಪ್ರತಿಭಾವಂತ ಯುವ ಆಟಗಾರ ಪೃಥ್ವಿ ಶಾಗೆ ಬಿಸಿಸಿಐ ವಿಧಿಸಿರುವ 8 ತಿಂಗಳ ಅಮಾನತು ಶಿಕ್ಷೆ ಅತ್ಯಂತ ಕ್ರೂರವಾಗಿದೆ ಎಂದು ಭಾರತದ ಮಾಜಿ ನಾಯಕ ದಿಲಿಪ್ ವೆಂಗ್‌ಸರ್ಕಾರ್ ಅಭಿಪ್ರಾಯಪಟ್ಟಿದ್ದಾರೆ.
ಫೆಬ್ರವರಿಯಲ್ಲಿ ಇಂದೋರ್‌ನಲ್ಲಿ ನಡೆದಿದ್ದ ಸೈಯದ್ ಮುಶ್ತಾಕ್ ಅಲಿ ಟಿ-20 ಟ್ರೋಫಿಯಲ್ಲಿ ಶಾಗೆ ನಡೆಸಲಾದ ಡೋಪಿಂಗ್ ಪರೀಕ್ಷೆಯಲ್ಲಿ ವಿಶ್ವ ಉದ್ದೀಪನ ಮದ್ದು ನಿಗ್ರಹ ದಳ(ವಾಡಾ) ನಿಷೇಧಿಸಿರುವ ದ್ರವ್ಯವನ್ನು ಸೇವಿಸಿರುವುದು ಖಚಿತವಾಗಿತ್ತು. ಡೋಪಿಂಗ್ ಪರೀಕ್ಷೆಯಲ್ಲಿ ವಿಫಲವಾಗಿರುವ 19ರ ಹರೆಯದ ಶಾಗೆ ನವೆಂಬರ್ 15ರ ತನಕ ಎಲ್ಲ ಮಾದರಿ ಕ್ರಿಕೆಟ್‌ನಿಂದ ನಿಷೇಧಿಸಲಾಗಿದೆ.
‘‘ಶಾ ಮಾಡಿರುವ ತಪ್ಪಿಗೆ ಹೋಲಿಸಿದರೆ ಅವರಿಗೆ ವಿಧಿಸಿರುವ ಶಿಕ್ಷೆ ಅತ್ಯಂತ ಕಠಿಣವಾಗಿದೆ. ಶಾ ಅವರ ವಯಸ್ಸು ಹಾಗೂ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಕಡಿಮೆ ಶಿಕ್ಷೆ ನೀಡಬೇಕಾಗಿತ್ತು. ಶಾ ಬಡ ಕುಟುಂಬದಿಂದ ಬಂದಿರುವ ಪ್ರತಿಭೆ. ರಾಜ್ಯಮಟ್ಟದಲ್ಲಿ, ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯಲ್ಲಿ ಅಥವಾ ಸಹಾಯಕ ಸಿಬ್ಬಂದಿಯ ಮೂಲಕ ಶಾಗೆ ಈ ಬಗ್ಗೆ ಅರಿವು ಮೂಡಿಸಬೇಕಾಗಿತ್ತು. ಬಡತನದ ಹಿನ್ನೆಲೆಯಿಂದ ಬಂದಿರುವ ಆಟಗಾರರಿಗೆ ನಿಷೇಧಿತ ದ್ರವ್ಯ ಹಾಗೂ ಕೆಮ್ಮು ಸಿರಪ್ ನಡುವೆ ವ್ಯತ್ಯಾಸ ಗೊತ್ತಿರುವುದಿಲ್ಲ’’ ಎಂದು ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥ ವೆಂಗ್‌ಸರ್ಕಾರ್ ಹೇಳಿದ್ದಾರೆ.
‘‘ಶಾಗೆ 8 ತಿಂಗಳು ಕಾಲ ನಿಷೇಧ ಹೇರುವ ಬದಲಿಗೆ ಮೂರರಿಂದ 4 ತಿಂಗಳು ನಿಷೇಧ ಹೇರಬೇಕಾಗಿತ್ತು. ಬಿಸಿಸಿಐನ ಈ ಕ್ರಮದಿಂದಾಗಿ ಶಾ ಹಲವು ಪ್ರಮುಖ ಪಂದ್ಯಗಳಿಂದ ವಂಚಿತರಾಗಲಿದ್ದಾರೆ. ಬಿಸಿಸಿಐನ ಈ ವಿಭಿನ್ನ ನಿಲುವು ಶಾ ಹಾಗೂ ಇತರ ಆಟಗಾರರಿಗೆ ಕಠಿಣ ಸಂದೇಶವಾಗಿದೆ’’ ಎಂದು ವೆಂಗ್‌ಸರ್ಕಾರ್ ಹೇಳಿದ್ದಾರೆ.







