ಜಮೀನು ಒತ್ತುವರಿಗೆ ವಿರೋಧ: 30ಕ್ಕೂ ಹೆಚ್ಚು ರೈತರ ಬಂಧನ

ಮಂಡ್ಯ, ಆ.3: ಒತ್ತುವರಿ ತೆರವಿಗೆ ವಿರೋಧಿಸಿದ ಚನ್ನಪಟ್ಟಣ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ 30ಕ್ಕೂ ಹೆಚ್ಚು ರೈತರನ್ನು ಪೊಲೀಸರು ಬಂಧಿಸಿದ ಘಟನೆ ಮದ್ದೂರು ತಾಲೂಕಿನ ಗಡಿ ಭಾಗ ಬೊಮ್ಮನಾಯಕನಹಳ್ಳಿ ಬಳಿ ಶನಿವಾರ ನಡೆದಿದೆ.
ಮದ್ದೂರು ತಾಲೂಕು ಗಡಿ ಭಾಗದ ಬೊಮ್ಮನಾಯಲನಹಳ್ಳಿ ಸಮೀಪ ಸರಕಾರಿ ಜಮೀನಲ್ಲಿ 13ಕ್ಕೂ ಹೆಚ್ಚಿನ ರೈತ ಕುಟುಂಬಗಳು ವ್ಯವಸಾಯ ಮಾಡುತ್ತಿದ್ದು, ಆ ಜಮೀನಿಲ್ಲಿ ಮೊರಾರ್ಜಿ ದೇಸಾಯಿ ಶಾಲೆ ನಿರ್ಮಾಣಕ್ಕಾಗಿ ಒತ್ತುವರಿ ತೆರವಿಗೆ ಆಗಮಿಸಿದಾಗ ಈ ಘಟನೆ ಸಂಭವಿಸಿದೆ.
ಒತ್ತುವರಿ ತೆರವಿಗೆ ರೈತರು, ರೈತ ಮಹಿಳೆಯರು ವಿರೋಧಿಸಿದರು. ಆಗ ಪರಸ್ಪರ ಮಾತಿನ ಚಕಮಕಿ ನಡೆಯಿತು. ಕೂಡಲೇ ಹಲವರನ್ನು ಪೊಲೀಸರು ಬಂಧಿಸಿ ಪರಿಸ್ಥಿತಿ ತಿಳಿಗೊಳಿಸಿದರು ಎನ್ನಲಾಗಿದೆ.
ನಂತರ, ಮದ್ದೂರು ತಾಲೂಕು ಕಚೇರಿಗೆ ಆಗಮಿಸಿ ಪ್ರತಿಭಟಿಸಿದ ಗ್ರಾಮಸ್ಥರು, ಹಲವಾರು ವರ್ಷಗಳಿಂದ ಬೇಸಾಯ ಮಾಡುತ್ತಿದ್ದ ಜಮೀನನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅಕ್ರಮವಾಗಿ ತೆರವು ಮಾಡಲು ಮುಂದಾಗಿರುವ ಕ್ರಮ ಸರಿಯಲ್ಲ ಎಂದು ಆರೋಪಿಸಿದರು. ಸುಮಾರು 32 ಎಕರೆ ಪ್ರದೇಶವನ್ನು 70 ವರ್ಷಗಳಿಂದ ನಾವು ಬೇಸಾಯ ಮಾಡಿಕೊಂಡು ಬರುತ್ತಿದ್ದೇವೆ. ಈ ಸಂಬಂಧ ಬಗರ್‍ಹುಕುಂಗೆ ಅರ್ಜಿ ಹಾಕಲಾಗಿದೆ ಎಂದು ಅವರು ಹೇಳಿದರು.
ಜಮೀನಿನಲ್ಲಿ ರಾಗಿ, ಉರುಳಿ, ತಗಣಿಕಾಳು, ಜೋಳ ಇನ್ನಿತರ ಬೆಳೆಗಳನ್ನು ಹಾಕಿದ್ದು, ನಮ್ಮ ಕಣ್ಮುಂದೆಯೇ ಬೆಳೆಗಳನ್ನು ಜೆಸಿಬಿ ಯಂತ್ರದ ಮೂಲಕ ಸುಮಾರು 200 ಪೊಲೀಸರ ರಕ್ಷಣೆಯಲ್ಲಿ ನೆಲಸಮ ಮಾಡಿದರು ಎಂದು ಅವರು ದೂರಿದರು.
ಪೊಲೀಸರು ದೌರ್ಜನ್ಯ ಮಾಡಿದ್ದಾರೆ. ಗುತ್ತಿಗೆದಾರರ ಕಡೆಯ ಗೂಂಡಾಗಳು ನಮ್ಮಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆಪಾದಿಸಿದ ಅವರು, ನಮ್ಮ ಜಮೀನನ್ನು ನಮಗೆ ನೀಡದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.







