'ತೆರಿಗೆ ಕಿರುಕುಳ' ವ್ಯಾಪಕವಾಗಿ ಹರಡುತ್ತಿದೆ: ಮೋಹನ್ ದಾಸ್ ಪೈ
“ತಮಗೆ ಟಾರ್ಗೆಟ್ ತಲುಪಬೇಕು ಎಂದು ಐಟಿ ಅಧಿಕಾರಿಗಳು ಹೇಳುತ್ತಾರೆ”

ಬೆಂಗಳೂರು, ಆ.4: ಕೆಫೆ ಕಾಫಿ ಡೇ ಸ್ಥಾಪಕ ವಿ.ಜಿ ಸಿದ್ಧಾರ್ಥ ಸಾವು ಪ್ರಕರಣಕ್ಕೆ ಸಂಬಂಧಿಸಿ ತೆರಿಗೆ ಇಲಾಖೆಯ ಮಿತಿಮೀರಿದ ಕ್ರಮಗಳನ್ನು ತಾನು ಟೀಕಿಸಿದ್ದಕ್ಕಾಗಿ ಉದ್ಯಮಿಗಳು ಮತ್ತು ದೇಶಾದ್ಯಂತ ಜನರಿಂದ ಒಳ್ಳೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ ಎಂದು ಮಣಿಪಾಲ್ ಗ್ಲೋಬಲ್ ಎಜುಕೇಶನ್ ಚೇರ್ ಮೆನ್ ಮತ್ತು ಇನ್ಫೋಸಿಸ್ ಮಾಜಿ ನಿರ್ದೇಶಕ ಟಿ.ವಿ. ಮೋಹನ್ ದಾಸ್ ಪೈ ಹೇಳಿದ್ದಾರೆ.
“ಹೊಸ ವರ್ಷ ಅಥವಾ ಹಬ್ಬದ ಶುಭಾಶಯಗಳಿಗಿಂತ ಹೆಚ್ಚು ನನಗೆ ವಾಟ್ಸ್ಯಾಪ್ ಮೆಸೇಜ್ ಗಳು ಬಂದಿವೆ. ಹಲವರು ನನಗೆ ಧನ್ಯವಾದ ತಿಳಿಸಿ ಅವರಿಗಾದ ಕೆಟ್ಟ ಅನುಭವಗಳನ್ನು ವಿವರಿಸಿದರು. ನನಗೆ ಆಘಾತವಾಯಿತು. ನಾವು ಯೋಚಿಸುವುದಕ್ಕಿಂತಲೂ ಹೆಚ್ಚು ಸಮಸ್ಯೆ ಹರಡುತ್ತಿದೆ” ಎಂದವರು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಮೋಹನ್ ದಾಸ್ ಪೈ ತೆರಿಗೆ ಭಯೋತ್ಪಾದನೆ ಬಗ್ಗೆ ಧ್ವನಿಯೆತ್ತುತ್ತಿದ್ದಾರೆ.
“”ಐಟಿ ಇಲಾಖೆಗೆ ತೆರಳಿದಾಗ ಹಣ ಪಾವತಿಸುವುದೇ ಒಳ್ಳೆಯದು ಎಂದು ಹೇಳಲಾಗುತ್ತದೆ ಎಂದು ಹಲವರು ನನಗೆ ಹೇಳಿದ್ದಾರೆ. ತಮಗೆ ಟಾರ್ಗೆಟ್ ತಲುಪಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ. ಗುರಿಯನ್ನು ತಲುಪಿದರೆ ಐಟಿ ಅಧಿಕಾರಿಗಳಿಗೆ ಏನಾದರೂ ಪ್ರೋತ್ಸಾಹಕ ಹಣ ಸಿಗಬಹುದೇ ಎನ್ನುವುದು ನನಗೆ ಗೊತ್ತಿಲ್ಲ. ನೇರ ತೆರಿಗೆಗಳ ಕೇಂದ್ರ ಮಂಡಳಿಯು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತದೆ ಮತ್ತು ಟಾರ್ಗೆಟ್ ತಲುಪದಿದ್ದಲ್ಲಿ ವರ್ಗಾವಣೆ ಮಾಡುವುದಾಗಿ ಹೇಳಲಾಗುತ್ತದೆ. ಅಧಿಕಾರಿಗಳು ಏನು ಮಾಡಬೇಕು? ಅವರೂ ಕೂಡ ಅಸಹಾಯಕರು” ಎಂದು ಪೈ ಹೇಳಿದ್ದಾರೆ.







