ಕೃಷ್ಣಾಕೊಳ್ಳ ಪ್ರದೇಶದಲ್ಲಿ ಪ್ರವಾಹ: ಸೋಮವಾರ ವೈಮಾನಿಕ ಸಮೀಕ್ಷೆ- ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು, ಆ.4: ಕೃಷ್ಣಾ ಕೊಳ್ಳ ಪ್ರದೇಶದಲ್ಲಿ ಮಳೆ ಹಾಗೂ ಪ್ರವಾಹದಿಂದ ಉಂಟಾಗಿರುವ ಸಂಕಷ್ಟದ ಕುರಿತು ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೂ ವೈಮಾನಿಕ ಸಮೀಕ್ಷೆ ಕೈಗೊಳ್ಳಲಿದ್ದು, ದಿಲ್ಲಿ ಪ್ರವಾಸದ ಸಂದರ್ಭದಲ್ಲಿ ಕೇಂದ್ರ ಸರಕಾರದ ಗಮನ ಸೆಳೆಯುತ್ತೇನೆ ಎಂದು ಸಿಎಂ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.
ಉತ್ತರ ಕರ್ನಾಟಕದ ಭಾಗದಲ್ಲಿ ಪ್ರವಾಹ ಸ್ಥಿತಿ ತಲೆದೋರಿದೆ. ಇಂತಹ ಸಂದರ್ಭದಲ್ಲಿ ದಿಲ್ಲಿಗೆ ಹೋಗುವ ಬದಲು ಪ್ರವಾಹಪೀಡಿತ ಪ್ರದೇಶಗಳ ಕಡೆಗೆ ಧಾವಿಸಿ ಪರಿಸ್ಥಿತಿ ಅವಲೋಕಿಸಬೇಕು ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿದ್ದು, ಅದಕ್ಕೆ ಸಿಎಂ ಪ್ರತಿಕ್ರಿಯಿಸಿದ್ದಾರೆ.
ಕೃಷ್ಣಾ ಕೊಳ್ಳ ಪ್ರದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಬೆಂಬಲವಾಗಿ ಸರಕಾರ ನಿಲ್ಲಲು ಸನ್ನದ್ಧವಾಗಿದೆ. ಜನ ಹಾಗೂ ಜಾನುವಾರುಗಳ ರಕ್ಷಣೆ, ಆಸ್ತಿಪಾಸ್ತಿಗೆ ಆಗಿರುವ ಹಾನಿ ಬಗ್ಗೆ ಮಾಹಿತಿ ಸಂಗ್ರಹಿಸಿ ಪರಿಹಾರ ಕಲ್ಪಿಸುವತ್ತ ಪ್ರವಾಹ ಪೀಡಿತ ಜಿಲ್ಲೆಗಳಾದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಜಿಲ್ಲಾಡಳಿತವನ್ನು ಸಜ್ಜುಗೊಳಿಸಲಾಗಿದೆ ಎಂದು ಸಿಎಂ ಪಾಟೀಲ್‌ಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.
ರವಿವಾರ ರಜಾ ದಿನವಾದರೂ ವಿಡಿಯೋ ಕಾನ್ಪರೆನ್ಸ್ ಮೂಲಕ ಐದು ಜಿಲ್ಲೆಗಳ ಪರಿಸ್ಥಿತಿಯ ಬಗ್ಗೆ ಅವಲೋಕನ ಹಾಗೂ ಪರಿಶೀಲನೆ ನಡೆಸಿ ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವಂತೆ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದ್ದೇನೆ. ಪರಿಶೀಲನೆಯಲ್ಲಿ ನನ್ನೊಂದಿಗೆ ಸರಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಮತ್ತಿತರೆ ಉನ್ನತ ಅಧಿಕಾರಿಗಳು ಭಾಗಿಯಾಗಿದ್ದರು ಎಂದು ಹೇಳಿದ್ದಾರೆ.
ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೂ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆಯನ್ನು ಕೈಗೊಳ್ಳಲಿದ್ದೇನೆ. ಅಲ್ಲದೆ, ದಿಲ್ಲಿ ಭೇಟಿಯ ಸಂದರ್ಭದಲ್ಲಿ ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿಯನ್ನು ಕೇಂದ್ರ ಸರಕಾರದ ಗಮನ ಸೆಳೆಯುತ್ತೇನೆ. ಹಾಗೂ ರಾಜ್ಯದ ಸಂಸದರೊಂದಿಗೆ ಸಭೆ ನಡೆಸಿ, ಸಂಕಷ್ಟ ಪರಿಸ್ಥಿತಿಯಲ್ಲಿ ಕೇಂದ್ರದ ಸಹಾಯವನ್ನು ಪಡೆದುಕೊಳ್ಳಲು ಸಹಾಯ ಕೋರುತ್ತೇನೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಮಹಾರಾಷ್ಟ್ರದ ಭಾಗದಲ್ಲಿ ಹಾಗೂ ಮುಂಬೈ ಕರ್ನಾಟಕದ ಬೆಳಗಾವಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಿದೆ. ಹೀಗಾಗಿ, ಕೃಷ್ಣಾ ನದಿಗೆ ಅಪಾರವಾದ ನೀರು ಹರಿಬಿಡಲಾಗಿದೆ. ಕೃಷ್ಣಾ ಕೊಳ್ಳದ ಹಿಪ್ಪರಗಿ, ಆಲಮಟ್ಟಿ, ನಾರಾಯಣಪುರ, ಗೂಗಲ್ ಜಲಾಶಯಗಳು ತುಂಬಿದ್ದು, ಅಲ್ಲಿನ ಗ್ರಾಮಗಳ ಸ್ಥಿತಿಯನ್ನು ಸಿಎಂಗೆ ಬರೆದ ಪತ್ರದಲ್ಲಿ ಎಚ್.ಕೆ.ಪಾಟೀಲ್ ವಿವರಿಸಿದ್ದಾರೆ.
ಮಳೆಯಿಂದಾಗಿ ನದಿಗಳಲ್ಲಿ ನೀರಿನ ಮಟ್ಟ ಏರುತ್ತಿರುವ ಕಾರಣ ಸಾಕಷ್ಟು ಸೇತುವೆಗಳು ಮುಳುಗಿವೆ. ಸಂಚಾರ ಸ್ಥಗಿತಗೊಂಡಿದೆ ಎಂದು ಈಗಾಗಲೇ ಮುಳುಗಡೆಯಾಗಿರುವ ಮತ್ತು ಮುಳುಗಡೆ ಭೀತಿ ಎದುರಿಸುತ್ತಿರುವ ಸೇತುವೆಗಳ ಪಟ್ಟಿ ನೀಡಿದ್ದಾರೆ. ಪ್ರವಾಹಕ್ಕೆ ತುತ್ತಾಗಿರುವ ಗ್ರಾಮಗಳ ಕಡೆಗೆ ರಸ್ತೆ ಸಂಪರ್ಕ, ವಿದ್ಯುತ್ ಕಡಿತಗೊಂಡಿದೆ. ಹೀಗಾಗಿ, ಯಾವುದೇ ಕಾಲಹರಣ ಮಾಡದೇ ತುರ್ತಾಗಿ ಪರಿಹಾರಕ್ಕಾಗಿ ಕೈಗೊಳ್ಳಬೇಕದ ಕ್ರಮಗಳ ಬಗ್ಗೆ ನಿರ್ಣಯ ಕೈಗೊಳ್ಳಲು ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಕರೆಯಬೇಕು. ಪ್ರಧಾನಿಯೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.







