ಸಂಘಟಿತ ತುಳು ಬ್ರಾಹ್ಮಣ ಸಮಾಜಕ್ಕಾಗಿ ವಿಶ್ವ ಸಮ್ಮೇಳನ: ಪಲಿಮಾರುಶ್ರೀ
ತುಳು ಶಿವಳ್ಳಿ ಬ್ರಾಹ್ಮಣ ವಿಶ್ವ ಸಮ್ಮೇಳನ ಪೂರ್ವಭಾವಿ ಸಭೆ

ಉಡುಪಿ, ಆ.4: ತುಳು ಶಿವಳ್ಳಿ ಬ್ರಾಹ್ಮಣರು ಉದ್ಯೋಗಾರ್ಥವಾಗಿ ದೇಶ- ವಿದೇಶಗಳಿಗೆ ತೆರಳಿ, ಹೋದ ಕಡೆಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಇದು ಈ ಸಮಾಜಕ್ಕೆ ದೊರಕಿದ ವರ. ವಿಶ್ವ ಸಮ್ಮೇಳನದ ಮೂಲಕ ಸಂಘಟಿತ ಸಮಾಜ ನಿರ್ಮಾಣದ ಗುರಿ ಹೊಂದಲಾಗಿದೆ ಎಂದು ಪರ್ಯಾಯ ಪಲಿಮಾರು ಮಠದ ಶ್ರೀವಿ್ಯಾಧೀಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಶ್ರೀಕೃಷ್ಣ ಮಠದ ಕನಕ ಮಂಟಪದಲ್ಲಿ ರವಿವಾರ ನಡೆದ ತುಳು ಶಿವಳ್ಳಿ ಬ್ರಾಹ್ಮಣರ ವಿಶ್ವ ಸಮ್ಮೇಳನದ ಕುರಿತು ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.ಸಮ್ಮೇಳನ ಮುಂದಿನ ಡಿಸೆಂಬರ್ ತಿಂಗಳು ಉಡುಪಿಯಲ್ಲಿ ನಡೆಯಲಿದೆ.
ದೇಶದಲ್ಲೇ ಅತಿಪ್ರಸಿದ್ಧವಾದ ಕೇರಳ ತಿರುವನಂತಪುರಂ ದೇವಸ್ಥಾನದ ಮುಖ್ಯ ಅರ್ಚಕರು ತೌಳವ ಬ್ರಾಹ್ಮಣರೆಂಬುದು ಹೆಮ್ಮೆಯ ಸಂಗತಿ. ಕೇರಳದಲ್ಲಿ ಶಿವಳ್ಳಿ ಬ್ರಾಹ್ಮಣರದ್ದು ಪ್ರತಿಷ್ಠಿತ ಸಮಾಜವಾಗಿದೆ. ಹೀಗಾಗಿ ಶಿವಳ್ಳಿ ಬ್ರಾಹ್ಮಣ ರನ್ನು ಒಂದೇ ವೇದಿಕೆಯಲ್ಲಿ ಸಂಘಟಿಸಿ ಸಮಾಜಕ್ಕೆ ಸಹಾಯಮಾಡುವ ನಿಟ್ಟಿನಲ್ಲಿ ವಿಶ್ವ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದವರು ವಿವರಿಸಿದರು.
ಡಿ.14 ಮತ್ತು 15ರಂದು ರಾಜಾಂಗಣದಲ್ಲಿ ನಡೆಯುವ ಸಮ್ಮೇಳನದ ಫಲಶ್ರುತಿಯಾಗಿ ಮೆಡಿಕಲ್ ಕಾಲೇಜೊಂದನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ. ಜೊತೆಗೆ ಐಎಎಸ್, ಐಪಿಎಸ್‌ನಂಥ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಲು ಸಮಾಜದ ಯುವಕ-ಯುವತಿಯರಿಗೆ ಸೂಕ್ತ ತರಬೇತಿ ನೀಡಲು ಸಹ ಚಿಂತನೆ ನಡೆಸಲಾಗಿದೆ ಎಂದು ಪಲಿಮಾರುಶ್ರೀ ಹೇಳಿದರು.
ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ಹಳ್ಳಿ-ಹಳ್ಳಿಗಳಲ್ಲಿ ಶಿವಳ್ಳಿ ಬ್ರಾಹ್ಮಣರನ್ನು ಒಟ್ಟುಗೂಡಿಸಿ ಸಣ್ಣ-ಸಣ್ಣ ಸಭೆಗಳನ್ನು ಆಯೋಜಿಸಿ ಸಮ್ಮೇಳನದ ಅರಿವು ನೀಡಬೇಕು. ಇದು ಹೆಚ್ಚು ಪ್ರಭಾವಶಾಲಿ ಮತ್ತು ಪ್ರಯೋಜನಕಾರಿಯಾಗಿದೆ. ಮುಖ್ಯವಾಗಿ ಗುರುಗಳಾದ ಆಚಾರ್ಯ ಮಧ್ವರ ಸಂದೇಶ ಎಲ್ಲಾ ಮನೆಗೂ ತಲುಪುವಂತಾಗಬೇಕು ಎಂದರು.
ಮಂಗಳೂರು ಶಾರದಾ ವಿದ್ಯಾಲಯದ ಮುಖ್ಯಸ್ಥ ಪ್ರೊ. ಎಂ.ಬಿ. ಪುರಾಣಿಕ್ ಮಾತನಾಡಿ, ಮುಂದಿನ ಪೀಳಿಗೆಗೆ ತೌಳವ ಬ್ರಾಹ್ಮಣರ ಸಂಸ್ಕಾರ, ಸಂಸ್ಕೃತಿ ಕಲಿಸುವ ದೃಷ್ಟಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಾಜದ ಯುವಕ-ಯುವತಿಯರು ಶಿವಳ್ಳಿ ಸಂಸ್ಕೃತಿಯಿಂದ ದೂರವಾಗಿರುವುದು ಖೇದಕರ. ಸಮಾಜದ ದಾರಿದ್ರ, ಬಡತನ ನಿವಾರಣೆ ಮತ್ತು ಬಾಹ್ಯ ಆಕ್ರಮಣ ಸಮರ್ಥವಾಗಿ ಎದುರಿಲು ಸಮ್ಮೇಳನ ಅಗತ್ಯ ಎಂದರು.
ಮಂಗಳೂರು ಶಾರದಾ ವಿದ್ಯಾಲಯದ ಮುಖ್ಯಸ್ಥ ಪ್ರೊ. ಎಂ.ಬಿ. ಪುರಾಣಿಕ್ ಮಾತನಾಡಿ, ಮುಂದಿನ ಪೀಳಿಗೆಗೆ ತೌಳವ ಬ್ರಾಹ್ಮಣರ ಸಂಸ್ಕಾರ, ಸಂಸ್ಕೃತಿ ಕಲಿಸುವ ದೃಷ್ಟಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಾಜದ ಯುವಕ-ಯುವತಿಯರು ಶಿವಳ್ಳಿ ಸಂಸ್ಕೃತಿಯಿಂದ ದೂರವಾಗಿರುವುದು ಖೇದಕರ. ಸಮಾಜದ ದಾರಿದ್ರ, ಬಡತನ ನಿವಾರಣೆ ಮತ್ತು ಬಾಹ್ಯ ಆಕ್ರಮಣ ಸಮರ್ಥವಾಗಿ ಎದುರಿಸಲು ಸಮ್ಮೇಳನ ಅಗತ್ಯ ಎಂದರು.
ಉದ್ಯಮಿ ಬಾಲಾಜಿ ರಾಘವೇಂದ್ರ ಆಚಾರ್ಯ, ಪ್ರದೀಪ್ ಕುಮಾರ್ ಕಲ್ಕೂರ, ಸಂಘಟನೆಯ ಬಾಲಕೃಷ್ಣ ಮಡಮಣ್ಣಿತ್ತಾಯ ಮುಂತಾದವರು ಉಪಸ್ಥಿತರಿದ್ದರು. ಪ್ರೊ.ಪಿ.ಕೆ. ಬಾಲಕೃಷ್ಣ ಮೂಡಂಬಡಿತ್ತಾಯ ಕಾರ್ಯಕ್ರಮ ನಿರೂಪಿಸಿದರು.








