ದೇಶದಲ್ಲಿ 19ಸಾವಿರ ಭಾಷೆಗಳಿದ್ದರೂ ಭಾಷಾ ನೀತಿ ಇಲ್ಲ: ಡಾ.ಬಿಳಿಮಲೆ
‘ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್.ಹೆಗ್ಡೆ’ ಪ್ರಶಸ್ತಿ ಪ್ರದಾನ

ಉಡುಪಿ, ಆ.4: ಭಾರತದಲ್ಲಿ ಇಂದು ಭಾಷೆ, ತತ್ವ, ತರ್ಕಶಾಸ್ತ್ರಗಳು ಸಾಯುತ್ತಿವೆ. ಆದರೆ ಸರಕಾರಗಳು ಈ ಬಗ್ಗೆ ಯೋಚನೆ ಮಾಡುತ್ತಿಲ್ಲ. ದೇಶ ದಲ್ಲಿ 19 ಸಾವಿರ ಭಾಷೆಗಳಿದ್ದರೂ ಒಂದು ಭಾಷಾ ನೀತಿಯನ್ನು ಜಾರಿ ಗೊಳಿಸಲು ಈವರೆಗೆ ಸಾಧ್ಯವಾಗಿಲ್ಲ. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಓದುವುದು ಮತ್ತು ಬರೆಯುವುದು ಸಮಕಾಲೀನ ಜಗತ್ತಿನಲ್ಲಿ ಬಹಳ ದೊಡ್ಡ ಸವಾಲು ಆಗಿದೆ ಎಂದು ಹೊಸದಿಲ್ಲಿಯ ಜವಾಹರ್‌ಲಾಲ್ ನೆಹರು ವಿವಿಯ (ಜೆಎನ್‌ಯು) ಭಾರತೀಯ ಭಾಷಾ ಕೇಂದ್ರದ ಅಧ್ಯಾಪಕ ಹಾಗೂ ವಿದ್ವಾಂಸ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಮತ್ತು ಮಣಿಪಾಲ ಅಕಾಡೆಮಿ ಆಪ್ ಹೈಯರ್ ಎಜ್ಯುಕೇಶನ್‌ಗಳ ಜಂಟಿ ಆಶ್ರಯದಲ್ಲಿ ರವಿವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ‘ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್.ಹೆಗ್ಡೆ’ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಭಾರತದ ತರ್ಕ ಶಾಸ್ತ್ರ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ನಾಶವಾಗುತ್ತದೆ. ತರ್ಕ ಶಾಸ್ತ್ರ ಸತ್ತ ದೇಶಗಳು ಅತ್ಯುತ್ತಮ ಮಾನವರನ್ನು ಸೃಷ್ಛಿ ಮಾಡಲು ಸಾಧ್ಯವಿಲ್ಲ. ಜ್ಞಾನ ಅಂತಾರಾಷ್ಟ್ರೀಕರಣಗೊಳ್ಳುವ ಹಾದಿಯಲ್ಲಿ ತುಳು ಸಂಸ್ಕೃತಿಯಂತಹ ಮಾನವಿಕಗಳು ತಮ್ಮ ನೆಲೆಯನ್ನು ಕಂಡುಕೊಳ್ಳಲು ಕಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ತುಳುನಾಡಿನ ಜ್ಞಾನಪರಂಪರೆಗೆ ಸಮರ್ಥ ಉತ್ತರಾಧಿಕಾರಿಗಳ ಅವಶ್ಯಕತೆ ಇದೆ ಎಂದರು.
ಮಕ್ಕಳಿಗೆ ಬೇಕಾದ ಭಾಷೆಯಲ್ಲಿ ಶಿಕ್ಷಣ ನೀಡುವಂತೆ ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ಆದೇಶ ನೀಡಿತು. ಇದರಿಂದ ದೇಶದ ಎಲ್ಲ ರಾಜ್ಯಗಳಿಗೆ ತನ್ನ ಭಾಷೆಗಳ ಮೇಲೆ ಹಿಡಿತವೇ ಇಲ್ಲವಾಯಿತು. ಈ ಬಗ್ಗೆ ಯಾರು ಕೂಡ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನೆ ಮಾಡಿಲ್ಲ. ಇದರ ವಿರುದ್ಧ ರಾಜ್ಯಗಳು ಸಂಘಟನೆ ಕಟ್ಟಿಕೊಂಡು ಹೋರಾಟ ಮಾಡಲು ಈವರೆಗೆ ಸಾಧ್ಯವಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಚೀನಾಕ್ಕೆ ಯುವಜನತೆಯ ರಫ್ತು
13ನೆ ಪಂಚವಾರ್ಷಿಕ ಯೋಜನೆಯಂತೆ ಕೇಂದ್ರ ಸರಕಾರ 2020ರ ವೇಳೆಗೆ ಭಾರತದ 40ಲಕ್ಷ ಯುವ ಜನತೆಯನ್ನು ಕೌಶಲ್ಯ ಅಭಿವೃದ್ಧಿಗಾಗಿ ಚೀನಾ ದೇಶಕ್ಕೆ ಕಳುಹಿಸಲು ಯೋಜನೆ ರೂಪಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಚೀನಾ ವಸ್ತು ಬಹಿಷ್ಕರಿಸಿ ಅಂತ ಬೊಬ್ಬೆ ಹಾಕು ತ್ತಿದ್ದಾರೆ. ಒಳಗಿನ ಸತ್ಯ ಹಾಗೂ ಹೊರಗೆ ಕಾಣುವ ಸತ್ಯ ಬೇರೆ ಬೇರೆ ಆಗಿರು ತ್ತದೆ. ಹೀಗಾಗಿ ಸರಕಾರ ಹೇಳುವುದನ್ನು ಯಾರು ಕೂಡ ಪೂರ್ತಿ ನಂಬ ಬಾರದು ಎಂದರು.
ಕರಡು ಹೊಸ ಶಿಕ್ಷಣ ನೀತಿಯು ಹಿಂದಿ, ಸಂಸ್ಕೃತ, ಇಂಗ್ಲಿಷ್‌ಗೆ ಆದ್ಯತೆ ನೀಡಿ, ತುಳುವಿನಂತಹ ಸಣ್ಣ ಭಾಷೆಗಳ ಬಗ್ಗೆ ನಿರ್ಲಕ್ಷ ತೋರುತ್ತಿದೆ. ಈ ನೀತಿಯಲ್ಲಿ ಕನ್ನಡದಂತಹ ಭಾಷೆಗಳಿಗೂ ಗೌರವ ಇಲ್ಲ. ಸಾರ್ವಜನಿಕರ ಚರ್ಚೆಗೆ ಈ ಕರಡನ್ನು ಸಂವಿಧಾನ ಅಂಗೀಕರಿಸಿರುವ 22 ಭಾಷೆಗಳಲ್ಲಿ ಪ್ರಕಟಿಸುವ ಬದಲು ಕೇವಲ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಪ್ರಕಟಿಸಲಾಗಿದೆ. ಇವೆಲ್ಲವನ್ನೂ ಉದ್ದೇಶಪೂರ್ವಕವಾಗಿಯೇ ಮಾಡಲಾಗುತ್ತಿದೆ ಎಂದವರು ಆರೋಪಿಸಿದರು.
ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್‌ನ ಆಡಳಿತಾಧಿ ಕಾರಿ ಡಾ.ಎಚ್.ಶಾಂತಾರಾಮ್ ವಹಿಸಿದ್ದರು. ಬೆಳ್ತಂಗಡಿ ವಾಣಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ಯದುಪತಿ ಗೌಡ ಅಭಿನಂದನಾ ಭಾಷಣ ಮಾಡಿದರು. ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ್ ಡಾ.ನಿಕೇತನ ‘ತುಳುವ ಇತಿಹಾಸ: ತುಳುನಾಡು ಮತ್ತು ಮಹಿಳೆ’ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಪ್ರಶಸ್ತಿ ಸಮಿತಿ ಸದಸ್ಯೆ ಡಾ.ಇಂದಿರಾ ಹೆಗ್ಗಡೆ ಪ್ರಾಸ್ತಾವಿಕವಾಗಿ ಮಾತನಾಡಿ ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜಕ ಪ್ರೊ. ವರದೇಶ ಹಿರೇಗಂಗೆ ಸ್ವಾಗತಿಸಿದರು. ಪೃಥ್ವಿರಾಜ್ ಕವತ್ತಾರ್ ವಂದಿಸಿದರು. ವಿ್ಯಾಲತಾ ಕಾರ್ಯಕ್ರಮ ನಿರೂಪಿಸಿದರು.
ತುಳು 8ನೆ ಪರಿಚ್ಛೇಧಕ್ಕೆ ಸೇರ್ಪಡೆ ಅಸಾಧ್ಯ
ವಾಜಪೇಯಿ ಸರಕಾರದ ಸಂದರ್ಭದಲ್ಲಿ ಐದು ಭಾಷೆಗಳ ಪಟ್ಟಿಯಲ್ಲಿರು ವಾಗಲೇ ಸಂವಿಧಾನದ ಎಂಟನೆ ಪರಿಚ್ಛೇಧಕ್ಕೆ ಸೇರ್ಪಡೆಗೊಳ್ಳಲು ಸಾಧ್ಯವಾಗದ ತುಳುವಿಗೆ, ಈಗ 140 ಭಾಷೆಗಳ ಪೈಪೋಟಿಯ ಮಧ್ಯೆ ಸೇರ್ಪಡೆಯಾಗಲು ಸಾಧ್ಯವೇ ಎಂಬುದು ಪ್ರಶ್ನೆಯಾಗಿದೆ. ಆದುದರಿಂದ ತುಳುನಾಡಿನ ಜನತೆ ಈ ವಿಚಾರವನ್ನು ಮರೆತು ಬಿಡುವುದು ಒಳ್ಳೆಯದು ಎಂದು ಡಾ.ಪುರುಷೋತ್ತಮ ಬಿಳಿಮಲೆ ತಿಳಿಸಿದರು.
2011ರ ಜನಗಣತಿಯ ಪ್ರಕಾರ ಭಾರತದಲ್ಲಿ ಒಟ್ಟು 19,543 ಭಾಷೆಗಳನ್ನು ಪಟ್ಟಿ ಮಾಡಲಾಗಿತ್ತು. ಇದರಲ್ಲಿ ಸಂವಿಧಾನ ಅಂಗೀಕರಿಸಿರುವುದು ಕೇವಲ 22 ಭಾಷೆಗಳನ್ನು ಮಾತ್ರ. ಬೇಡಿಕೆಯಂತೆ ವಾಜಪೇಯಿ ಸರಕಾರ ಮತ್ತೆ ನಾಲ್ಕು ಸಣ್ಣ ಭಾಷೆಗಳನ್ನು ಸಂವಿಧಾನದ ಎಂಟನೆ ಪರಿಚ್ಛೇಧಕ್ಕೆ ಸೇರಿಸಿತು. ಈ ಪಟ್ಟಿಯಲ್ಲಿ ಐದನೆ ಸ್ಥಾನದಲ್ಲಿದ್ದ ತುಳು ಭಾಷೆ ಸರಿಯಾದ ಧ್ವನಿ ಇಲ್ಲದೆ ತಪ್ಪಿ ಹೋಯಿತು ಎಂದು ಅವರು ಹೇಳಿದರು.
ಸೀತಾಕಾಂತ ಮಹಾಪಾತ್ರ ಸಮಿತಿ 8ನೆ ಪರಿಚ್ಛೇಧಕ್ಕೆ ಸೇರ್ಪಡೆಗೊಳ್ಳಲು ಅರ್ಹವಾಗಿರುವ ತುಳು ಸಹಿತ 39 ಭಾಷೆಗಳ ಪಟ್ಟಿಯನ್ನು ತಯಾರಿಸಿತು. ಹೀಗೆ ದೇಶದಲ್ಲಿ ಈಗ 140 ಭಾಷೆಗಳು ಎಂಟನೆ ಪರಿಚ್ಛೇಧಕ್ಕೆ ಸೇರ್ಪಡೆ ಗೊಳ್ಳಲು ತಯಾರಾಗಿ ನಿಂತಿವೆ. ಯಾವುದೇ ಸರಕಾರಕ್ಕೂ 140 ಭಾಷೆಗಳನ್ನು ಸಂವಿಧಾನಕ್ಕೆ ಸೇರಿಸಲು ಸಾಧ್ಯವೇ ಇಲ್ಲ. ಇದರ ಪರಿಣಾಮ ಭಾಷೆಗಳಿಗೆ ಸಂವಿಧಾನಾತ್ಮಕವಾಗಿ ಸಿಗಬೇಕಾದ ಲಾಭವನ್ನು ಸರಕಾರ ಕಡಿತಗೊಳಿಸುವ ಮೂಲಕ ಅದನ್ನು ನಿರ್ಜೀವಗೊಳಿಸುವ ಕಾರ್ಯ ವಾಡುತ್ತಿದೆ ಎಂದು ಅವರು ಟೀಕಿಸಿದರು.







