ಭಡ್ತಿ ಮೀಸಲಾತಿ ಕುರಿತು ಸಾಣೇಹಳ್ಳಿ ಸ್ವಾಮಿಯ ಹೇಳಿಕೆ ಹಿಂಪಡೆಯಲು ದಸಂಸ ಆಗ್ರಹ
ಬೆಂಗಳೂರು, ಆ.4: ಭಡ್ತಿ ಮೀಸಲಾತಿ ನೀಡುವ ಅಗತ್ಯವಿಲ್ಲ ಎಂದಿರುವ ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿಯ ಹೇಳಿಕೆ ದಲಿತ ಸಮುದಾಯಕ್ಕೆ ದಿಗ್ಬ್ರಮೆ ಹುಟ್ಟಿಸಿದ್ದು, ಈ ಕೂಡಲೇ ಅವರು ತಮ್ಮ ಹೇಳಿಕೆ ಹಿಂಪಡೆಯಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
ಮಂಗಳೂರಿನಲ್ಲಿ ನಡೆದ ಮತ್ತೆ ಕಲ್ಯಾಣ ಕಾರ್ಯಕ್ರಮದಲ್ಲಿ ಮಾತನಾಡಿರುವ ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ, ಶತಮಾನಗಳಿಂದ ತುಳಿತಕ್ಕೆ ಒಳಗಾದವರಿಗೆ ಶಿಕ್ಷಣ ಹಾಗೂ ಸೌಲಭ್ಯಗಳಲ್ಲಿ ಮೀಸಲಾತಿ ನೀಡಬೇಕು. ಆದರೆ, ಮೀಸಲಾತಿ ಪಡೆದು ಅಭಿವೃದ್ಧಿ ಹೊಂದಿದವರ ಮಕ್ಕಳಿಗೂ ಮತ್ತೆ ಮೀಸಲಾತಿ ಬೇಡ. ಅಂತೆಯೇ ಭಡ್ತಿಯಲ್ಲೂ ಮೀಸಲಾತಿ ನೀಡುವ ಅಗತ್ಯವಿಲ್ಲ ಎಂದಿದ್ದಾರೆ. ಆದರೆ, ಸ್ವಾಮೀಜಿ ಹೇಳಿಕೆ ದಲಿತ ಸಮುದಾಯಕ್ಕೆ ದಿಗ್ಬ್ರಮೆ ಹುಟ್ಟಿಸಿದ್ದು, ಬಸವ ತತ್ವದ ಆಧಾರದ ಮೇಲೆ ಸಮಾನತೆಯ ಸಮಾಜ ಕಟ್ಟಲು ಹೊರಟಿರುವ ಅವರಿಂದ ಇಂತಹ ಮಾತುಗಳು ನಿರೀಕ್ಷಿಸಲಿರಲಿಲ್ಲ ಎಂದು ದಸಂಸ ರಾಜ್ಯ ಸಂಚಾಲಕ ಲಕ್ಷ್ಮಿ ನಾರಾಯಣ ನಾಗವಾರ ಬೇಸರ ವ್ಯಕ್ತಪಡಿಸಿದ್ದಾರೆ.
ಭಡ್ತಿ ಮೀಸಲಾತಿ ಅವಶ್ಯಕತೆ ಕುರಿತು ಸ್ವಾಮೀಜಿಗೆ ಮಾಹಿತಿಯ ಕೊರತೆ ಇದೆ. ಅಲ್ಲದೆ, ದಲಿತ ಸಮುದಾಯಕ್ಕೆ ಮೀಸಲಾತಿ ನೀಡಬೇಕಾದ್ದು, ನ್ಯಾಯ ಸಮ್ಮತ.ಸುಪ್ರೀಂ ಕೋರ್ಟ್ ಸಹ ಭಡ್ತಿ ಮೀಸಲಾತಿ ಪರ ನಿಂತಿದೆ.ಆದರೆ, ಕೆಲ ಜಾತಿವಾದಿ ರಾಜಕಾರಣಿಗಳು ನ್ಯಾಯಾಲಯ ಆದೇಶಗಳನ್ನು ಗೌರವ ನೀಡದೆ, ಸಮಾಜದಲ್ಲಿ ವಿಷದ ಬೀಜ ಭಿತ್ತಲು ಮುಂದಾಗಿದ್ದಾರೆ ಎಂದು ಅವರು ಹೇಳಿದರು.