'ಹಾರುವ ಯಂತ್ರ'ದಲ್ಲಿ 20 ನಿಮಿಷಗಳಲ್ಲಿ ಕಡಲ್ಗಾಲುವೆ ದಾಟಿದ ಸಾಹಸಿಗ!
ವಿಡಿಯೋ ವೈರಲ್
ಪ್ಯಾರಿಸ್,ಆ.4: ಜೆಟ್ ಇಂಜಿನ್ ಚಾಲಿತ ‘ಫ್ಲೈಬೋರ್ಡ್’ ಹಾರಾಟ ಉಪಕರಣದ ಮೂಲಕ ಫ್ರೆಂಚ್ ಸಾಹಸಿಯೊಬ್ಬರು ಇಂಗ್ಲೀಷ್ ಕಡಲ್ಗಾಲುವೆಯನ್ನು ಯಶಸ್ವಿಯಾಗಿ ದಾಟುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.
ಫ್ರಾನ್ಸ್ನ ಉತ್ತರ ಕರಾವಳಿಯ ನಗರ ಸ್ಯಾಂಗಟ್ಟೆಯಿಂದ ‘ಫ್ಲೈಬೋರ್ಡ್’ಹಾರಾಟ ಯಂತ್ರದ ಮೂಲಕ ಫ್ರಾಂಕಿ ಝಪಾಟ್ಟ ಅವರು 20 ನಿಮಿಷಗಳೊಳಗೆ ಇಂಗ್ಲೆಂಡ್ನ ದಕ್ಷಿಣ ಕರಾವಳಿಯಲ್ಲಿರುವ ಸೈಂಟ್ ಮ್ಯಾರ್ಗರೆಟ್ ಬೇನಲ್ಲಿ ಬಂದಿಳಿದಿದ್ದಾರೆ.
ಮೂರು ಹೆಲಿಕಾಪ್ಟರ್ಗಳ ಬೆಂಗಾವಲಿನೊಂದಿಗೆ ರವಿವಾರ ಮುಂಜಾವಿನಲ್ಲಿ ಹಾರಾಟ ಆರಂಭಿಸಿದ ಝಪಟ್ಟಾ ಅವರು ಕೇವಲ 20 ನಿಮಿಷಗಳಲ್ಲಿ ರಮಣೀಯವಾದ ಮ್ಯಾರ್ಗರೆಟ್ ಬೇ ತಲುಪುವಲ್ಲಿ ಯಶಸ್ವಿಯಾದರು.
ಐದು ಟರ್ಬೈನ್ ಎಂಜಿನ್ಗಳನ್ನು ಒಳಗೊಂಡ ಫ್ಲೈಬೋರ್ಡ್ ಉಪಕರಣವು ತಾಸಿಗೆ 190 ಕಿ.ಮೀ. ವೇಗದಲ್ಲಿ ಝಪಟ್ಟಾ ಅವರನ್ನು ಇಂಗ್ಲೀಷ್ ಕಡಲ್ಗಾಲುವೆಯನ್ನು ದಾಟಿಸುವಲ್ಲಿ ಸಫಲವಾಯಿತು.
ಕಳೆದ ಜುಲೈನಲ್ಲಿ ಝಪಟ್ಟಾ ಅವರು ಕಡಲ್ಗಾಲುವೆ ದಾಟುವ ಸಾಹಸವನ್ನು ಕೈಗೊಂಡಿದ್ದರಾದರೂ, ತಾಂತ್ರಿಕ ಸಮಸ್ಯೆಯಿಂದಾಗಿ ಅವರು ಅರ್ಧದಲ್ಲೇ ತಮ್ಮ ಸಾಹಸಪಯಣವನ್ನು ಮೊಟಕು ಗೊಳಿಸಬೇಕಾಯಿತು.