‘ಹೆಲ್ಮೆಟ್ ಇಲ್ಲದಿದ್ದರೆ ಪೆಟ್ರೋಲ್ ಇಲ್ಲ’ ನಿಯಮ ಜಾರಿಗೆ ಒಪ್ಪಿಗೆ
ಸಾಂದರ್ಭಿಕ ಚಿತ್ರ
ಬೆಂಗಳೂರು, ಆ.4: ನಗರದಾದ್ಯಂತ ರಸ್ತೆ ಸುರಕ್ಷತಾ ದೃಷ್ಟಿಯಿಂದ ಹೆಲ್ಮೆಟ್ ಇಲ್ಲದ ದ್ವಿಚಕ್ರ ವಾಹನ ಸವಾರರಿಗೆ ಪೆಟ್ರೋಲ್ ನಿರಾಕರಿಸುವ ಸಂಚಾರ ಪೊಲೀಸರ ಪ್ರಸ್ತಾವನೆಗೆ ಪೆಟ್ರೋಲ್ ಬಂಕ್ಗಳ ಮಾಲಕರು ಸಮ್ಮತಿ ಸೂಚಿಸಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ನಾಳೆಯಿಂದಲೇ ಹೆಲ್ಮೆಟ್ ಇಲ್ಲದಿದ್ದರೆ ಪೆಟ್ರೋಲ್ ಇಲ್ಲ ಎಂಬ ಹೊಸ ನಿಯಮ ಜಾರಿಗೆ ಬರಲಿದೆ. ಈ ಸಂಬಂಧ ಇಂಧನ ಕಂಪೆನಿಗಳ ಅಧಿಕಾರಿಗಳಿಗೆ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಹರಿಶೇಖರನ್ ಪತ್ರಬರೆದಿದ್ದರು. ಅಲ್ಲದೆ, ಸಭೆ ನಡೆಸಿ, ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಬಂಕ್ ಮಾಲಕರಿಗೆ ವಿಷಯವನ್ನು ಮನವರಿಗೆ ಮಾಡಿಕೊಡಲಾಗಿದೆ. ಇದಕ್ಕೆ ಮಾಲಕರು ಒಪ್ಪಿಗೆ ನೀಡಿದ್ದರಿಂದ ಇಂದಿನಿಂದಲೇ ಹೊಸ ನಿಯಮ ಅನ್ವಯವಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಹೊಸದಾಗಿ ಜಾರಿಗೆ ತಂದಿರುವ ನಿಯಮವನ್ನು ಬಂಕ್ಗಳು ಪಾಲಿಸಬೇಕು. ಯಾರಾದರೂ ದೌರ್ಜನ್ಯಕ್ಕೆ ಮುಂದಾದರೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ದೂರು ನೀಡಿ. ಕೂಡಲೇ ಪೊಲೀಸರು ಸ್ಥಳಕ್ಕೆ ಬಂದು ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಲಾಗಿದೆ. ಇದಕ್ಕೆ ಪೆಟ್ರೊಲ್ ಬಂಕ್ಗಳ ಮಾಲಕರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಪೂರ್ವ ಸಂಚಾರ ವಿಭಾಗ ಡಿಸಿಪಿ ಡಾ. ಕೆ.ವಿ. ಜಗದೀಶ್ ತಿಳಿಸಿದ್ದಾರೆ.
ನಗರದಲ್ಲಿನ ಪೆಟ್ರೋಲ್ ಬಂಕ್ಗಳಿಗೆ ರೌಡಿಗಳು, ಪುಡಾರಿಗಳು, ಗೂಂಡಾಗಳು ಸೇರಿದಂತೆ ಎಲ್ಲ ರೀತಿಯ ಜನರು ಬರುತ್ತಿರುತ್ತಾರೆ. ಬಂದವರೆಲ್ಲರೂ ಒಂದೇ ರೀತಿಯಲ್ಲಿ ವ್ಯವಹರಿಸುವುದಿಲ್ಲ. ಆದರೆ, ಸಮಾಜ ಸೇವೆ ಎಂಬ ಕಾರಣದಿಂದ ಒಪ್ಪಿದ್ದೇವೆ. ಅಲ್ಲದೆ, ನಾವು ಇದನ್ನು ಜಾರಿ ಮಾಡುವ ವಿಚಾರದಲ್ಲಿ ಸೂಕ್ತ ಭದ್ರತೆ ಕಲ್ಪಿಸುವಂತೆ ಕೇಳಿದ್ದೇವೆ.
- ರವೀಂದ್ರನ್, ಪೆಟ್ರೋಲ್ ಬಂಕ್ ಡೀಲರ್ಸ್ ಅಸೋಸಿಯೇಷನ್ ಮುಖಂಡ