ಪರಸ್ಪರ ಸಹಕಾರ ಇದ್ದರೆ ಅಭಿವೃದ್ಧಿ ಸಾಧ್ಯ: ಡಾ.ಐವಾನ್ ಮಿಸ್ನರ್
ಬೆಂಗಳೂರು, ಆ.3: ಒಬ್ಬರಿಗೊಬ್ಬರು ಸೌಹಾರ್ದಯುತವಾಗಿ ವಿಚಾರ ಮಂಥನ, ವಿನಿಮಯ ಮತ್ತು ಸಹಕಾರ ಭಾವನೆ ತೋರಿದರೆ ಇಬ್ಬರ ವ್ಯವಹಾರಗಳೂ ವೃದ್ಧಿಯಾಗುತ್ತವೆ. ಈ ನಿಟ್ಟಿನಲ್ಲಿ ಎಲ್ಲರೂ ತಮ್ಮ ವೃತ್ತಿಯಲ್ಲಿ ಸಹಕಾರ ಭಾವನೆಯನ್ನು ಹೊಂದಿರಬೇಕು ಎಂದು ಬ್ಯುಸಿನೆಸ್ ನೆಟ್‌ವರ್ಕ್ ಇಂಟರ್‌ನ್ಯಾಷನಲ್(ಬಿಎನ್‌ಐ)ನ ಅಧ್ಯಕ್ಷ ಡಾ.ಐವಾನ್ ಮಿಸ್ನರ್ ಸಂಸ್ಥೆಯ ಸದಸ್ಯರಿಗೆ ಕಿಮಾತು ಹೇಳಿದ್ದಾರೆ.
ಬಿಎನ್‌ಐ ವತಿಯಿಂದ ಬೆಂಗಳೂರು ಚಾಪ್ಟರ್‌ನಲ್ಲಿ ಮೆಂಬರ್ಸ್ ಡೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಒಂದು ಉದ್ಯಮ, ವ್ಯಾಪಾರ ವಹಿವಾಟು, ವೃತ್ತಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಎರಡೂ ಕೈಜೋಡಿಸಿದರೆ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದರು.
ಮನುಷ್ಯ ಸಂಘಜೀಯಾಗಿದ್ದಾನೆ. ಇಲ್ಲಿ ಯಾರೂ ಕೂಡ ಒಬ್ಬಂಟಿಯಲ್ಲ. ಒಂದಲ್ಲಾ ಒಂದು ವಿಧದಲ್ಲಿ ಒಬ್ಬ ವ್ಯಕ್ತಿಗೆ ಮತ್ತೊಬ್ಬ ವ್ಯಕ್ತಿ ನೆರವಿನ ಹಸ್ತ ಚಾಚುತ್ತಾನೆ. ಹೀಗೆ ನೆವಿನ ಹಸ್ತ ಚಾಚುವುದರಿಂದ ಅವರಿಬ್ಬರ ಭವಿಷ್ಯ ಉಜ್ವಲವಾಗುತ್ತದೆ. ಈ ಹಿನ್ನೆಲೆಯಲ್ಲಿ ನೀವೆಲ್ಲಾ ನಿಮ್ಮ ನಿಮ್ಮ ಕ್ಷೇತ್ರದ ಮತ್ತೊಬ್ಬರಿಗೆ ಪರಸ್ಪರ ನೆರವಾಗುವ ಮೂಲಕ, ನಿಮ್ಮ ಚಿಂತನೆಗಳನ್ನು ಹಂಚಿಕೊಳ್ಳುವ ಮೂಲಕ ಯಶಸ್ಸಿನ ಬೆನ್ನನ್ನು ಏರಬೇಕು ಎಂದು ಅವರು ಕಿವಿಮಾತು ಹೇಳಿದರು.
ಭಾರತದಲ್ಲಿ ಬಿಎನ್‌ಐ 617 ಚಾಪ್ಟರ್‌ಗಳನ್ನು ಹೊಂದಿದ್ದು, 77 ನಗರಗಳಲ್ಲಿ 29,939 ಸದಸ್ಯರನ್ನು ಹೊಂದಿದೆ. ಈ ಸಂಸ್ಥೆಯ ಸದಸ್ಯರು ಕಳೆದ 12 ತಿಂಗಳಲ್ಲಿ ಒಟ್ಟು 11,569 ಕೋಟಿ ರೂ. ವ್ಯವಹಾರ ನಡೆಸಿದ್ದಾರೆ. ಬಿಎನ್‌ಐ ಸದಸ್ಯರು ಒಟ್ಟಾಗಿ ಕಲೆತು ದೇಶ ಮತ್ತು ನಗರಗಳಲ್ಲಿ ಇರುವ ಅವಕಾಶಗಳ ಬಗ್ಗೆ ಚರ್ಚೆ ನಡೆಸಿದರು ಮತ್ತು ವ್ಯವಹಾರ ವೃದ್ಧಿಗೆ ಪೂರಕವಾದ ಅಂಶಗಳ ವಿಚಾರ ವಿನಿಮಯ ಮಾಡಿಕೊಳ್ಳಬೇಕೆಂದು ಅವರು ಹೇಳಿದರು.