ಆ.5ರಿಂದ ಸಂಚಾರಿ ಪೀಠದಲ್ಲಿ ವ್ಯಾಜ್ಯಗಳ ಪರಿಹಾರ
ಬೆಂಗಳೂರು, ಆ.4: ಬೆಂಗಳೂರಿನಲ್ಲಿ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಂಚಾರಿ ಪೀಠದ ಮುಖಾಂತರ ರಾಜ್ಯ ಗ್ರಾಹಕರ ಆಯೋಗ, ಬಸವ ಭವನದ 4ನೆ ಮಹಡಿಯಲ್ಲಿ ಆ.5ರಿಂದ 9ರವರೆಗೆ ಕಲಾಪಗಳು ನಡೆಸಲು ನಿಗದಿಯಾಗಿರುತ್ತದೆ. ಈ ಅವಧಿಯಲ್ಲಿ ಸಂಬಂಧಿಸಿದಂತೆ ಮೇಲ್ಮನವಿ ವ್ಯಾಜ್ಯದ 140 ಪ್ರಕರಣಗಳನ್ನು ವಿಚಾರಣೆಗೆ ತೆಗೆದುಕೊಳ್ಳಲಾಗುವುದು. ಸಾರ್ವಜನಿಕರು ಮತ್ತು ವಕೀಲರು ಸದರಿ ಸಂಚಾರಿ ಪೀಠದಲ್ಲಿ ತಮ್ಮ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಕಲಾಪ, ವಿಚಾರಣೆಯಲ್ಲಿ ಭಾಗವಹಿಸಿ ವಿಲೇವಾರಿಗೆ ಸಹಕರಿಸಬಹುದಾಗಿರುತ್ತದೆ.
ರಾಷ್ಟ್ರೀಯ ಗ್ರಾಹಕರ ಆಯೋಗದ ಸಂಚಾರಿ ಪೀಠದ ಮುಖಾಂತರ ವಿಚಾರಣಾ ಕಲಾಪವನ್ನು ಹಮ್ಮಿಕೊಂಡಿರುವುದರಿಂದ ಗ್ರಾಹಕ ವ್ಯಾಜ್ಯಗಳ ಕಕ್ಷಿಗಾರರು, ವಕೀಲರು ಮತ್ತು ಸಂಬಂಧಿಸಿದವರು ದೂರದ ಹೊಸದಿಲ್ಲಿಗೆ ಪ್ರಯಾಣ ಮಾಡುವುದು ತಪ್ಪುವುದಲ್ಲದೆ ಸಮಯ ಮತ್ತು ಅನವಶ್ಯಕ ಖರ್ಚು ವೆಚ್ಚಗಳು ಉಳಿತಾಯವಾಗುವುದು. ಇದರಿಂದ, ವ್ಯಾಜ್ಯ ಪ್ರಕರಣಗಳು ಶೀಘ್ರಗತಿಯಲ್ಲಿ ತೀರ್ಮಾನವಾಗಲು ಅನುಕೂಲವಾಗಲಿದೆ ಎಂದು ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ರಿಜಿಸ್ಟ್ರಾರ್ ಮತ್ತು ಆಡಲಿತಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







