ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಭರವಸೆ: ಪ್ರತಿಭಟನೆ ಹಿಂಪಡೆದ ಎಐಐಎಂಎಸ್ ವೈದ್ಯರು

ಹೊಸದಿಲ್ಲಿ, ಆ. 4: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಮಸೂದೆ ಕುರಿತ ಆತಂಕವನ್ನು ಸಮರ್ಪಕ ರೀತಿಯಲ್ಲಿ ಪರಿಹರಿಸಲಾಗುವುದು ಎಂದು ಆರೋಗ್ಯ ಸಚಿವ ಹರ್ಷವರ್ಧನ್ ಭರವಸೆ ನೀಡಿದ ಬಳಿಕ ಎಐಐಎಂಎಸ್‌ನ ನಿವಾಸಿ ವೈದ್ಯರು ಶನಿವಾರ ಪ್ರತಿಭಟನೆ ಹಿಂಪಡೆದಿದ್ದಾರೆ ಹಾಗೂ ಕರ್ತವ್ಯ ಆರಂಭಿಸಿದ್ದಾರೆ.
ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ)ದ ನಿಯಮ ರೂಪಿಸುವಾಗ ಆತಂಕ ಪರಿಹರಿಸಲಾಗುವುದು ಎಂದು ಕೇಂದ್ರ ಸಚಿವರು ಸಭೆಯಲ್ಲಿ ಭರವಸೆ ನೀಡಿದ್ದಾರೆ ಎಂದು ನಿವಾಸಿ ವೈದ್ಯರ ಅಸೋಸಿಯೇಶನ್ (ಆರ್‌ಡಿಎ) ತಿಳಿಸಿದೆ.
ಆಯೋಗದ ನಿಯಮ ರೂಪಿಸುವಾಗ ಎಐಐಎಂಎಸ್‌ನ ನಿವಾಸಿ ವೈದ್ಯರ ಅಸೋಸಿ ಯೇಶನ್ ಹಾಗೂ ವಿದ್ಯಾರ್ಥಿ ಒಕ್ಕೂಟದ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಸಚಿವರು ಭರವಸೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.
ಎಐಐಎಂಎಸ್, ಸಫ್ದರ್‌ಜಂಗ್ ಆಸ್ಪತ್ರೆಯ ನಿವಾಸಿ ವೈದ್ಯರ ಅಸೋಸಿಯೇಶನ್ (ಆರ್‌ಡಿಎ)ನ ನಿಯೋಗವನ್ನು ಹರ್ಷವರ್ಧನ್ ಭೇಟಿಯಾಗಿದ್ದಾರೆ. ರೋಗಿಗಳು ಸಮಸ್ಯೆ ಎದುರಿಸುವ ಹಿನ್ನೆಲೆಯಲ್ಲಿ ನಿವಾಸಿ ವೈದ್ಯರು ತಮ್ಮ ಪ್ರತಿಭಟನೆಯನ್ನು ಹಿಂದೆ ತೆಗೆಯಲು ನಿರ್ಧರಿಸಿದ್ದಾರೆ ಎಂದು ಅವು ತಿಳಿಸಿವೆ.
ಆದರೆ, ಸಪ್ಧರ್‌ಜಂಗ್ ಆಸ್ಪತ್ರೆಯ ನಿವಾಸಿ ವೈದ್ಯರು ಅನಿವಾರ್ಯವಲ್ಲದ ಸೇವೆಗಳನ್ನು ಇದುವರೆಗೆ ಆರಂಭಿಸಿಲ್ಲ. ಆಸ್ಪತ್ರೆಯ ನಿವಾಸಿ ವೈದ್ಯರ ಅಸೋಸಿಯೇಶನ್ ನ ಆಡಳಿತ ಮಂಡಳಿ ಸಭೆಯ ಬಳಿಕ ಪ್ರತಿಭಟನೆ ಹಿಂದೆ ತೆಗೆದುಕೊಳ್ಳುವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಐಐಎಂಎಸ್‌ನ ಆರ್‌ಡಿಎ ಆಡಳಿತ ಮಂಡಳಿ ಸಭೆಯಲ್ಲಿ ಪ್ರತಿಭಟನೆ ಹಿಂಪಡೆಯಲು ಕಾರ್ಯಕಾರಿ ಸಮಿತಿ ನಿರ್ಧರಿಸಿತ್ತು ಹಾಗೂ ಕೂಡಲೇ ಅನುಷ್ಠಾನಕ್ಕೆ ಬರುವಂತೆ ಎಲ್ಲ ಸೇವೆಗಳನ್ನು ಆರಂಭಿಸಿತು.







