ರಾಜಧಾನಿಯಲ್ಲಿ ಬೇಕಾಬಿಟ್ಟಿ ಸ್ಕೈವಾಕ್: ಬಿಬಿಎಂಪಿ ವಿರುದ್ಧ ಪೊಲೀಸರ ಆಕ್ರೋಶ

ಬೆಂಗಳೂರು, ಆ.4: ರಾಜಧಾನಿಯಲ್ಲಿನ ವಾಹನ ದಟ್ಟನೆಯನ್ನು ತಡೆಯಲು ಬಿಬಿಎಂಪಿ ನಗರದ ವಿವಿಧೆಡೆ ಬೇಕಾಬಿಟ್ಟಿ ಸ್ಕೈವಾಕ್‌ಗಳನ್ನು ನಿರ್ಮಿಸಿರುವುದಕ್ಕೆ ಸಂಚಾರಿ ಪೊಲೀಸರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಚಾರಿ ಪೊಲೀಸರು ಸೂಚಿಸಿರುವ ಪ್ರದೇಶಗಳನ್ನು ಬಿಟ್ಟು ಬಿಬಿಎಂಪಿಯವರು ಬೇಕಾಬಿಟ್ಟಿ ಪಾದಚಾರಿ ಮೇಲ್ಸೇತುವೆಗಳನ್ನು ನಿರ್ಮಿಸಿರುವುದರಿಂದ ನಗರದಲ್ಲಿ ಸಂಚಾರಿ ದಟ್ಟಣೆ ಹೆಚ್ಚಾಗಲು ಕಾರಣವಾಗಿದೆ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ಪಾಲಿಕೆಗೆ ಪತ್ರ ಬರೆದಿದ್ದಾರೆ.
ನಗರದ 34 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಾದಚಾರಿಗಳ ಸಂಖ್ಯೆ ಹೆಚ್ಚಿರುವ ಹಾಗೂ ಅಪಘಾತ ಉಂಟಾಗುವ ರಸ್ತೆಗಳಲ್ಲಿ ಸ್ಕೈವಾಕ್ ನಿರ್ಮಿಸುವಂತೆ 109 ಸ್ಥಳಗಳನ್ನು ಗುರುತಿಸಿ ಬಿಬಿಎಂಪಿಗೆ ಸಲ್ಲಿಸಲಾಗಿತ್ತು. ಆದರೆ, ಪಾಲಿಕೆ ಅಧಿಕಾರಿಗಳು ಸಂಚಾರಿ ಪೊಲೀಸರು ನೀಡಿದ ಪಟ್ಟಿಯಂತೆ ಪಾದಚಾರಿ ಮೇಲ್ಸೇತುವೆ ನಿರ್ಮಿಸದೆ ಬೇರೆ ಪ್ರದೇಶಗಳಲ್ಲಿ ಸ್ಕೈವಾಕ್ ನಿರ್ಮಾಣ ಮಾಡಿದ್ದಾರೆ. ಇದರಿಂದ ಪಾದಚಾರಿಗಳಿಗಷ್ಟೇ ಅಲ್ಲದೆ ವಾಹನ ಸಂಚಾರಕ್ಕೂ ಸಮಸ್ಯೆಯಾಗುತ್ತಿದೆ ಎಂದು ಹರಿಶೇಖರನ್ ಆರೋಪಿಸಿದ್ದಾರೆ.
ಜಾಹೀರಾತುದಾರರು ಬಿಬಿಎಂಪಿ ಅಧಿಕಾರಿಗಳ ಮೇಲೆ ಒತ್ತಡ ತಂದು ಪೊಲೀಸರು ಸೂಚಿಸಿರುವ ಪ್ರದೇಶಗಳನ್ನು ಬದಲಿಸಿ ತಮಗೆ ಬೇಕಾದ ಸ್ಥಳಗಳಲ್ಲಿ ಮೇಲ್ಸೇತುವೆಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂದು ಹರಿಶೇಖರನ್ ದೂರಿದ್ದಾರೆ. ಇನ್ನು ಮುಂದೆ ಸ್ಕೈವಾಕ್ ನಿರ್ಮಾಣಕ್ಕೂ ಮುನ್ನ ಸಂಚಾರಿ ಪೊಲೀಸರೊಂದಿಗೆ ಜಂಟಿ ಸ್ಥಳ ಪರಿಶೀಲನೆ ನಡೆಸಬೇಕು.
ಮೇಲ್ಸೇತುವೆಗಳ ನಿರ್ಮಾಣ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗದಂತೆ ಎಚ್ಚರ ವಹಿಸಬೇಕು ಎಂದು ಅವರು ಪತ್ರದಲ್ಲಿ ಎಚ್ಚರಿಸಿದ್ದಾರೆ. ಮೈಸೂರು ರಸ್ತೆಯ ಗೋಪಾಲನ್ ಮಾಲ್ ಎದುರಿಗೆ ಒಂದು ಸ್ಕೈವಾಕ್ ನಿರ್ಮಿಸಲಾಗಿದ್ದು, 100 ಮೀಟರ್ ಅಂತರದಲ್ಲಿರುವ ಸ್ಮಶಾನದ ಎದುರು ಪಾದಚಾರಿ ಮೇಲ್ಸೇತುವೆ ನಿರ್ಮಿಸಲಾಗಿದೆ.
ಈ ಮಾರ್ಗಗಳನ್ನು ಪಾದಚಾರಿಗಳು ಬಳಸುವುದೇ ಅಪರೂಪ. ಸ್ಮಶಾನದ ಮುಂದೆ ನಿರ್ಮಿಸಿರುವ ಸ್ಕೈವಾಕ್‌ಗಳ ಮೇಲೆ ದೆವ್ವಗಳು ಓಡಾಡುತ್ತವೆಯೇ ಎಂದು ಕಳೆದ ಪಾಲಿಕೆ ಸಭೆಯಲ್ಲಿ ಬಿಜೆಪಿ ಸದಸ್ಯ ಉಮೇಶ್‌ಶೆಟ್ಟಿ ಆರೋಪಿಸಿದ್ದರು.
ಶೆಟ್ಟಿ ಅವರ ಆರೋಪದ ಬೆನ್ನಲ್ಲೆ ಸಂಚಾರಿ ಪೊಲೀಸರು ಬಿಬಿಎಂಪಿಯವರು ಬೇಕಾಬಿಟ್ಟಿ ಪಾದಚಾರಿ ಮೇಲ್ಸೇತುವೆ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿರುವುದು ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ.
ಇನ್ನು ಮುಂದೆ ಪೊಲೀಸ್ ಇಲಾಖೆಯವರು ನೀಡಿರುವ ಪಟ್ಟಿಯಂತೆ ಯಾವುದೇ ಒತ್ತಡಕ್ಕೆ ಮಣಿಯದೆ ಸ್ಕೈವಾಕ್ ನಿರ್ಮಾಣ ಮಾಡಲಾಗುವುದು.
-ಗಂಗಾಂಬಿಕೆ, ಬಿಬಿಎಂಪಿ ಮೇಯರ್







