ಶಿವಮೊಗ್ಗ: ಶಂಕಿತ ಡೆಂಗ್ ಗೆ ಬಾಲಕ ಬಲಿ

ಶಿವಮೊಗ್ಗ, ಆ. 5: ಶಿವಮೊಗ್ಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಶಂಕಿತ ಡೆಂಗ್ ಜ್ವರದಿಂದ ಬಳಲುತ್ತಿದ್ದ ಸಾಗರ ಪಟ್ಟಣದ ಎಸ್.ಎನ್.ನಗರದ ನಿವಾಸಿ ಮಹಮ್ಮದ್ ಆಜಾನ್ (10) ಎಂಬ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ವರದಿಯಾಗಿದೆ.
ಸುಮಾರು ಒಂದು ವಾರದ ಹಿಂದೆ ಬಾಲಕ ತೀವ್ರ ಸ್ವರೂಪದ ಜ್ವರದಿಂದ ಬಳಲುತ್ತಿದ್ದ ಆಜಾನ್ ನನ್ನು ಕುಟುಂಬದವರು ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಬಾಲಕನ ಆರೋಗ್ಯದಲ್ಲಿ ಚೇತರಿಕೆ ಕಂಡುಬರದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬಾಲಕ ಮೃತಪಟ್ಟಿದ್ದಾನೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿಯವರು ಸೋಮವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿ, 'ಡೆಂಗ್ ಜ್ವರದಿಂದ ಬಾಲಕ ಮೃತಪಟ್ಟಿದ್ದಾನೆ ಎಂಬುವುದು ಇಲ್ಲಿಯವರೆಗೂ ದೃಢಪಟ್ಟಿಲ್ಲ. ರಕ್ತದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯದ ಪರೀಕ್ಷೆಗೆ ರವಾನಿಸಲಾಗಿದೆ. ವರದಿಯ ನಂತರ ಸಾವಿಗೆ ಸ್ಪಷ್ಟ ಕಾರಣ ತಿಳಿದು ಬರಲಿದೆ' ಎಂದು ತಿಳಿಸಿದ್ದಾರೆ.





