ಬೆಳಗಾವಿ: ಪ್ರವಾಹದಲ್ಲಿ ಸಿಲುಕಿ ವ್ಯಕ್ತಿ ಮೃತ್ಯು

ಸಾಂದರ್ಭಿಕ ಚಿತ್ರ
ಬೆಳಗಾವಿ, ಆ. 5: ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದಲ್ಲಿ ಕೃಷ್ಣಾ ನದಿಯ ಪ್ರವಾಹದ ನೀರಿಗೆ ಸಿಲುಕಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.
ಮೃತಪಟ್ಟ ವ್ಯಕ್ತಿಯನ್ನು ಹುಲಗಬಾಳಿ ಗ್ರಾಮದ ಮಾರುತಿ ಜಾಧವ್ (52) ಎಂದು ಗುರುತಿಸಲಾಗಿದೆ. ಕೃಷ್ಣಾ ನದಿ ಪ್ರವಾಹದ ಹಿನ್ನೆಲೆಯಲ್ಲಿ ನಿನ್ನೆ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿತ್ತು. ಆದರೆ, ಜಾನುವಾರುಗಳನ್ನು ಸ್ಥಳಾಂತರ ಮಾಡಿರಲಿಲ್ಲ. ಹೀಗಾಗಿ ಜಾನುವಾರುಗಳ ರಕ್ಷಣೆಗೆ ತೆರಳಿದ್ದ ಮಾರುತಿ ಜಾಧವ್ ಪ್ರವಾಹದ ನೀರಿನ ರಭಸಕ್ಕೆ ಈಜಲು ಸಾಧ್ಯವಾಗದೆ ನೀರಿನ ಸೆಳೆತಕ್ಕೆ ಸಿಲುಕಿ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳೀಯರ ನೆರವಿನಿಂದ ಅಗ್ನಿ ಶಾಮಕ ಸಿಬ್ಬಂದಿ ಮೃತದೇಹವನ್ನು ಪತ್ತೆ ಮಾಡಿ ಕೃಷ್ಣಾನದಿಯಿಂದ ಹೊರ ತೆಗೆದಿದ್ದಾರೆ.
ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಹುಲಗಬಾಳ ಗ್ರಾಮದ ಮಧ್ಯೆದಲ್ಲಿ ಶವವನ್ನಿಟ್ಟು ಗ್ರಾಮಸ್ಥರು ಧರಣಿ ನಡೆಸಿದರು. ಪ್ರಕರಣ ಸಂಬಂಧ ಇಲ್ಲಿನ ಅಥಣಿ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.





