ಬಂಟ್ವಾಳ ತಾಲೂಕಿನ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕಣ್ಗಾವಲು !
ಪೊಲೀಸ್ ಇಲಾಖೆಯಿಂದ 20 ಕಡೆಗಳಲ್ಲಿ ಕ್ಯಾಮೆರಾ ಅಳವಡಿಕೆ

ಬಂಟ್ವಾಳ, ಆ. 5: ಹೆದ್ದಾರಿಯಲ್ಲಿ ಸಂಚರಿಸುವಾಗ ಇನ್ನು ಮುಂದೆ ಕಾನೂನುಗಳನ್ನು ಪಾಲಿಸುವುದು ಕಡ್ಡಾಯ. ತಪ್ಪಿದರೆ ಕಾನೂನು ಪ್ರಕಾರ ದಂಡ ಇಲ್ಲವೇ ಶಿಕ್ಷೆ ಅನುಭವಿಸಲು ಸಿದ್ಧರಾಗಿ. ಏಕೆಂದರೆ, ಬಂಟ್ವಾಳ ಪೊಲೀಸ್ ವೃತ್ತ ವ್ಯಾಪ್ತಿಯಲ್ಲಿ ಒಟ್ಟು 20 ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಗಳು ವಾಹನ ಸವಾರರು ಹಾಗೂ ಜನರ ಮೇಲೆ ಕಣ್ಗಾವಲು ಇರಿಸಿವೆ.
ಬಂಟ್ವಾಳದಿಂದ ಫರಂಗಿಪೇಟೆ, ಕಲ್ಲಡ್ಕ ಹೀಗೆ ಹೆದ್ದಾರಿಯ ಪ್ರಮುಖ ಜಾಗಗಳಲ್ಲಿ ಸಿಸಿ ಕ್ಯಾಮೆರಾ ಹಾಕಲಾಗಿದೆ. ಫರಂಗಿಪೇಟೆ, ತಲಪಾಡಿ, ಕೈಕಂಬ, ನಾರಾಯಣಗುರು ವೃತ್ತ, ಬಿ.ಸಿ.ರೊಡ್ ಬಸ್ ನಿಲ್ದಾಣ ಆಸುಪಾಸು, ಕಲ್ಲಡ್ಕ, ಕಡೆಗೋಳಿ ಸಹಿತ ತಾಲೂಕಿನ ಪ್ರಮುಖ ಜಂಕ್ಷನ್‌ಗಳಲ್ಲಿ ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಲ್ಪಡುವ ಜಾಗಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.
ಪೊಲೀಸ್ ಇಲಾಖೆಯಿಂದಲೇ ಸಿಸಿಟಿವಿ ಅಳವಡಿಕೆ:
ಕಳೆದ ಕೆಲ ವರ್ಷಗಳಿಂದ ಬಂಟ್ವಾಳ ಪ್ರದೇಶಗಳಲ್ಲಿ ನಾನಾ ಕಾರಣಗಳಿಂದ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕೆನ್ನುವ ಬೇಡಿಕೆ ಇತ್ತು. ಬಂಟ್ವಾಳ ಪುರಸಭೆಯಲ್ಲಿ ತ್ಯಾಜ್ಯ ವಿಲೇವಾರಿ ಸಂದರ್ಭ ಅಲ್ಲಲ್ಲಿ ಕಸ ಎಸೆಯುವವರನ್ನು ಕಂಡುಹಿಡಿಯಲಾದರೂ ಸಿಸಿ ಕ್ಯಾಮೆರಾ ಇಡಬೇಕು ಎಂಬ ಚರ್ಚೆಯಾಗಿತ್ತು. ನಗರ ಸೌಂದರ್ಯೀಕರಣ ಸಂದರ್ಭ ಎಷ್ಟು ಖರ್ಚಾದರು ಪರವಾಗಿಲ್ಲ. ಸಿಸಿ ಕ್ಯಾಮೆರಾ ಹಾಕಬೇಕು ಎಂದು ವಿಧಾನಸಭೆ ಚುನಾವಣೆ ಗೆದ್ದ ಬಳಿಕ ನಡೆಸಿದ ಮೀಟಿಂಗ್‌ಗಳಲ್ಲಿ ಶಾಸಕ ರಾಜೇಶ್ ನಾಯ್ಕಾ ಪ್ರಸ್ತಾಪಿಸಿದ್ದರು. ಆದರೆ, ಪುರಸಭೆಯಲ್ಲೀಗ ಚುನಾಯಿತ ಪ್ರತಿನಿಗಳು ಇಲ್ಲದ ಕಾರಣ ಸಿಸಿ ಕ್ಯಾಮೆರಾ ಅಳವಡಿಸಿ ತ್ಯಾಜ್ಯ ಎಸೆಯುವುದನ್ನು ನಿಯಂತ್ರಿಸುವ ಕಾರ್ಯಕ್ಕೆ ಚಾಲನೆ ದೊರಕಿಲ್ಲ. ನಗರ ಸೌಂದರ್ಯೀಕರಣದ ಪ್ರಸ್ತಾಪ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇದ್ದ ಸಂದರ್ಭ ಸಿಸಿ ಕ್ಯಾಮೆರಾ ಅಳವಡಿಸುವ ಕುರಿತು ಮಾತುಕತೆಯಾದರೂ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಆದರೆ, ಅಪರಾಧ ತಡೆ ಹಾಗೂ ಕಾನೂನು ಪಾಲನೆ ವಿಚಾರದಲ್ಲಿ ಪ್ರತಿದಿನ, ಕ್ಷಣವೂ ಅಮೂಲ್ಯವಾದ ಕಾರಣ ಪೊಲೀಸ್ ಇಲಾಖೆಯೇ ಕ್ಯಾಮೆರಾ ಅಳವಡಿಸುವ ಜವಾಬ್ದಾರಿ ಹೊತ್ತುಕೊಂಡಿತು. ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಎಲ್ಲೆಡೆ ಈ ವ್ಯವಸ್ಥೆ ಜಾರಿಗೆ ಬರುವ ಸಂದರ್ಭ ಬಂಟ್ವಾಳದಲ್ಲೂ ಇದು ಅಸ್ತಿತ್ವಕ್ಕೆ ಬಂತು.
ಚಲನವಲನಗಳ ಮೇಲೆ ನಿಗಾಕ್ಕೂ ಸಹಕಾರಿ:
ಎರಡು ವರ್ಷಗಳ ಹಿಂದೆ ಅಹಿತಕರ ಘಟನೆಗಳಿಂದ ಗಮನ ಸೆಳೆದಿದ್ದ ಕಲ್ಲಡ್ಕ, ಫರಂಗಿಪೇಟೆ, ಬಂಟ್ವಾಳ, ಬಿ.ಸಿ.ರೋಡ್‌ಗಳಲ್ಲಿ ಹತ್ಯೆ, ಗುಂಪು ಹಲ್ಲೆ, ಹೊಡೆದಾಟ, ಕಲ್ಲು ತೂರಾಟ, ಹಿಟ್ ಆಂಡ್ ರನ್ ಪ್ರಕರಣಗಳು, ಕಾನೂನು ಉಲ್ಲಂಘನೆಯಂಥ ಪ್ರಕರಣಗಳು ಸಾರ್ವಜನಿಕ ಸ್ಥಳದಲ್ಲಿ ನಡೆದಿದ್ದರೆ, ಕಳ್ಳತನದಂಥ ಸನ್ನಿವೇಶಗಳೂ ಕಂಡುಬಂದಿದ್ದವು. ಇದಲ್ಲದೆ ಬೆಂಗಳೂರು-ಮಂಗಳೂರು, ಚಿಕ್ಕಮಗಳೂರು- ಮಂಗಳೂರು ಹಾಗೂ ಮೈಸೂರು ಮಂಗಳೂರುಗಳಿಗೆ ಬಿ.ಸಿ.ರೋಡ್ ಮೂಲಕವೇ ಸಾಗಬೇಕಾದ ಕಾರಣ ಹಲವು ಅಪರಾಧ ಪ್ರಕರಣಗಳ ತನಿಖೆಗೆ ಸಿಸಿ ಕ್ಯಾಮರಾಗಳು ಉಪಯೋಗಕ್ಕೆ ದೊರಕಿವೆ. ಟ್ರಾಫಿಕ್ ನಿಯಮ ಉಲ್ಲಂಘಿಸಿ ಮೊಬೈಲ್‌ನಲ್ಲಿ ಮಾತನಾಡಿಕೊಂಡು, ಸೀಟ್ ಬೆಲ್ಟ್ ಧರಿಸದೆ ಅಥವಾ ಅಡ್ಡಾದಿಡ್ಡಿಯಾಗಿ ವೇಗವಾಗಿ ವಾಹನಗಳನ್ನು ಚಲಾಯಿಸುವ ಪ್ರಕರಣಗಳು ಪೊಲೀಸರ ಕಣ್ತಪ್ಪಿಸಿ ಮಾಡುವುದು ಕಂಡುಬಂದ ಹಿನ್ನೆಲೆಯಲ್ಲಿ ಸಿಸಿ ಕ್ಯಾಮೆರಾದ ತುರ್ತು ಅವಶ್ಯಕತೆಯನ್ನು ಸ್ಥಳೀಯ ಅಕಾರಿಗಳು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದರು.
ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು, ಅಪರಾಧ ಚಟುವಟಿಕೆ ಕುರಿತು ನಿಗಾ ಇರಿಸಲು ಕ್ಯಾಮೆರಾವನ್ನು ಪೊಲೀಸ್ ಇಲಾಖೆ ವತಿಯಿಂದ ಅಳವಡಿಸಲಾಗಿದೆ. ಸ್ಟೇಶನ್ ಗಳಲ್ಲಿ ಇದರ ನಿಯಂತ್ರಣಾ ವಿಭಾಗವಿದ್ದು, ಚಲನವಲನಗಳನ್ನು ಸೂಕ್ಷ್ಮವಾಗಿ ಅವಲೋಕಿಸಲು ಇದರಿಂದ ಸಾಧ್ಯ.
-ಚಂದ್ರಶೇಖರ ಎಚ್.ವಿ, ಉಪನಿರೀಕ್ಷಕರು, ಬಂಟ್ವಾಳ ನಗರ ಠಾಣೆ.
ಎಚ್ಚರಿಕೆಯ ಸಂದೇಶ ವೈರಲ್:
ಬಂಟ್ವಾಳ, ಬಿ.ಸಿ.ರೋಡ್ ಹೋಗುವವರು ದ್ವಿ-ಚಕ್ರ ವಾಹನ ಚಾಲಕರು ಹೆಲ್ಮೆಟ್ ಇಲ್ಲದೆ ಚಲಾಯಿಸುವವರ ಗಮನಕ್ಕೆ. ಪಟ್ಟಣದಲ್ಲಿ ಸಿಸಿ ಕೆಮೆರಾ ಅಳವಡಿಸಲಾಗಿದೆ. ಉಲ್ಲಂಘನೆ ಮಾಡಿದವರಿಗೆ ದಂಡ ವಾಹನದ ನೊಂದಣಿ ಸಂಖ್ಯೆಯಲ್ಲಿ ಬರುತ್ತದೆ ಎಂಬ ಸಂದೇಶಗಳು ವಾಟ್ಸಾಪ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರ ಕ್ಯಾಮೆರಾಕ್ಕೆ ಸಾರ್ವಜನಿಕರೂ ಸ್ಪಂದಿಸುತ್ತಿದ್ದಾರೆ.
ಪೊಲೀಸ್ ಇಲಾಖೆಗೆ ಬಲ:
ಅಪರಾಧಗಳು, ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಪೊಲೀಸರು ಬಂಟ್ವಾಳದ ವಿವಿಧೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿರುವ ಕಾರ್ಯ ಶ್ಲಾಘನೀಯ. ಇದು ಪೊಲೀಸ್ ಇಲಾಖೆಗೆ ಇನ್ನಷ್ಟು ಬಲ ತುಂಬಿದೆ. ಹೆದ್ದಾರಿಯಲ್ಲಿ ನಡೆಯುವ ಅಪಘಾತ ಪ್ರಕರಣಗಳು ಹಾಗೂ ಇನ್ನಿತರ ಚಟುವಟಿಕೆಗಳಿಗೆ ಇದು ಸಹಕಾರಿಯಾಗಲಿದೆ. ಆದರೆ, ಕೇವಲ ಕ್ಯಾಮೆರಾಗಳನ್ನು ಅಳವಡಿಸಿದರೆ ಸಾಲದು. ಸಿಸಿಟಿವಿಯ ನಿರ್ವಹಣೆ ಹಾಗೂ ನಿಯಂತ್ರಣವೂ ಅಗತ್ಯ.
-ಬೊಂಡಾಲ ಚಿತ್ತರಂಜನ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ








