ಶಿವಮೊಗ್ಗ ಜಿಲ್ಲೆಯಲ್ಲಿ 292 ಡೆಂಗ್ ಪ್ರಕರಣ ಪತ್ತೆ: ಆರೋಗ್ಯಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ

ಡಾ.ರಾಜೇಶ್ ಸುರಗೀಹಳ್ಳಿ
ಶಿವಮೊಗ್ಗ, ಆ. 5: ಪ್ರಸ್ತುತ ವರ್ಷದ ಜನವರಿಯಿಂದ ಇಲ್ಲಿಯವರೆಗೂ ಜಿಲ್ಲೆಯಲ್ಲಿ ಒಟ್ಟಾರೆ 292 ಡೆಂಗ್ ಪ್ರಕರಣಗಳು ಪತ್ತೆಯಾಗಿವೆ. ರೋಗಕ್ಕೆ ತುತ್ತಾದವರು ಗುಣಮುಖರಾಗಿದ್ದಾರೆ. ಯಾವುದೇ ಸಾವಿನ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ ಅವರು ಸ್ಪಷ್ಟಪಡಿಸಿದ್ದಾರೆ.
ಸೋಮವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಶಿವಮೊಗ್ಗ, ಸಾಗರ, ತೀರ್ಥಹಳ್ಳಿ ಹಾಗೂ ಶಿಕಾರಿಪುರ ತಾಲೂಕುಗಳಲ್ಲಿ ಹೆಚ್ಚಿನ ಪ್ರಮಾಣದ ಡೆಂಗ್ ಪ್ರಕರಣಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಇಲ್ಲಿಯವರೆಗೂ ಜಿಲ್ಲೆಯ ಏಳು ತಾಲೂಕುಗಳ 141 ಹಳ್ಳಿಗಳಲ್ಲಿ ಜ್ವರ ಪ್ರಕರಣಗಳು ಕಂಡುಬಂದಿವೆ. ಇಲಾಖೆಯ ಸಿಬ್ಬಂದಿಗಳನ್ನೊಳಗೊಂಡ ಮೂರು ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ. ಜ್ವರ ಪ್ರಕರಣಗಳು ಕಂಡುಬಂದ ಹಳ್ಳಿಗಳಿಗೆ ಈ ತಂಡ ಭೇಟಿಯಿತ್ತು ಪರಿಶೀಲನೆ ನಡೆಸಿದೆ. ಜ್ವರ ಪೀಡಿತರ ಆರೋಗ್ಯ ತಪಾಸಣೆ ಮಾಡಿದೆ. ಜೊತೆಗೆ ಜ್ವರ, ಸೊಳ್ಳೆಗಳ ಹಾವಳಿ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳು, ಪರಿಸರ ಸ್ವಚ್ಚತೆ ಮತ್ತಿತರ ವಿಷಯಗಳ ಕುರಿತಂತೆ ಗ್ರಾಮಸ್ಥರಿಗೆ ಮಾಹಿತಿ ನೀಡುತ್ತಿದೆ. ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಹಾಗೆಯೇ ಸೊಳ್ಳೆಗಳ ಹಾವಳಿ ತಡೆಗೆ ಫಾಗಿಂಗ್ ಕೂಡ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
ಅಗತ್ಯವಿರುವೆಡೆ ಮೊಬೈಲ್ ಕ್ಲಿನಿಕ್ಗಳನ್ನು ತೆರೆಯಲಾಗುವುದು. ಈಗಾಗಲೇ ಶಿಕಾರಿಪುರ ತಾಲೂಕಿನ ಗಾಂಧಿನಗರದಲ್ಲಿ ಮೊಬೈಲ್ ಕ್ಲಿನಿಕ್ ತೆರೆಯಲಾಗಿದೆ. ಪ್ರಸ್ತುತ ಜಿಲ್ಲೆಯಾದ್ಯಂತ ಮುಂಗಾರು ಮಳೆಯಾಗುತ್ತಿರುವುದರಿಂದ ಡೆಂಗ್ ಜ್ವರ ನಿಯಂತ್ರಣದಲ್ಲಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.







