ಕಾಶ್ಮೀರದ ಕೊನೆಯ ಯುವರಾಜ ಕರಣ್ ಸಿಂಗ್ ಸಂಸತ್ತಿನಲ್ಲಿ ಮಾಡಿದ್ದ ಭಾಷಣದಲ್ಲಿ ಹೇಳಿದ್ದೇನು ?
ಇಲ್ಲಿದೆ ಸಂಪೂರ್ಣ ವಿವರ

ಹೊಸದಿಲ್ಲಿ, ಆ.5: “ಜಮ್ಮು ಕಾಶ್ಮೀರದ ವಿಷಯವು ತುಂಬಾ ಸಂಕೀರ್ಣ ಮತ್ತು ಜಟಿಲ ವ್ಯವಹಾರವಾಗಿದ್ದು, ಇದನ್ನು ಯಾವುದೇ ಮ್ಯಾಜಿಕ್ ಬುಲೆಟ್‌ನಿಂದ ರಾತ್ರೋರಾತ್ರಿ ಪರಿಹರಿಸಲು ಆಗದು” ಎಂದು 2016ರಲ್ಲಿ ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ಕಾಂಗ್ರೆಸ್ ಮುಖಂಡ ಡಾ ಕರಣ್ ಸಿಂಗ್ ಹೇಳಿದ್ದರು.
ಕರಣ್ ಸಿಂಗ್ ಜಮ್ಮು ಕಾಶ್ಮೀರದ ಕೊನೆಯ ಯುವರಾಜನಾಗಿದ್ದು, ಜಮ್ಮು ಕಾಶ್ಮೀರದ ಕೊನೆಯ ದೊರೆ ಮಹಾರಾಜ ಹರಿಸಿಂಗ್ ಪುತ್ರ. ಕರಣ್ ಸಿಂಗ್ ಸಂಸತ್ತಿನಲ್ಲಿ ಮಾಡಿದ್ದ ಭಾಷಣದ ಸಾರಾಂಶ ಇಲ್ಲಿದೆ:
ಭಾರತದೊಂದಿಗೆ ವಿಲೀನಗೊಳ್ಳುವ ಒಪ್ಪಂದ ಪತ್ರಕ್ಕೆ ತಂದೆ 1947ರ ಅಕ್ಟೋಬರ್ 27ರಂದು ಸಹಿ ಹಾಕಿದಂದಿನಿಂದ ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ನಾನಾಗ ಕೋಣೆಯಲ್ಲಿ ಕುಳಿತಿದ್ದೆ. ಆದರೆ ದಯವಿಟ್ಟು ನೆನಪಿಸಿಕೊಳ್ಳಿ; ನನ್ನ ತಂದೆ ಮೂರು ವಿಷಯದ ಮೇಲೆ ಒಪ್ಪಿಕೊಂಡರು - ರಕ್ಷಣೆ, ಸಂವಹನ ಮತ್ತು ವಿದೇಶ ವ್ಯವಹಾರ. ರಾಜರ ಆಡಳಿತದಲ್ಲಿದ್ದ ಇತರ ಪ್ರದೇಶಗಳು ಸಹಿ ಹಾಕಿದಂತೆಯೇ ನನ್ನ ತಂದೆ ಕೂಡಾ ಸಹಿ ಹಾಕಿದ್ದಾರೆ. ಇತರ ರಾಜ್ಯಗಳು ಬಳಿಕ ಭಾರತದೊಂದಿಗೆ ವಿಲೀನಗೊಂಡವು. ಆದರೆ ಜಮ್ಮು ಕಾಶ್ಮೀರ ಮಾತ್ರ ವಿಲೀನಗೊಂಡಿಲ್ಲ. ಜಮ್ಮು ಮತ್ತು ಕಾಶ್ಮೀರವು ಭಾರತದ ಇತರ ಪ್ರದೇಶಗಳೊಂದಿಗೆ ಹೊಂದಿರುವ ಸಂಬಂಧಕ್ಕೆ 370ನೇ ವಿಧಿ ಮಾರ್ಗಸೂಚಿಯಾಗಿದೆ. ಹೌದು, ಅದು ಭಾರತದ ಅವಿಭಾಜ್ಯ ಅಂಗವಾಗಿದೆ. ಆದರೆ ಈ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಬಳಿಕ 1952ರಲ್ಲಿ ಶೇಖ್ ಅಬ್ದುಲ್ಲಾ ಮತ್ತು ಜವಾಹರಲಾಲ್ ನೆಹರೂ ಮಧ್ಯೆ ರಾಜಕೀಯ ಒಪ್ಪಂದ ಏರ್ಪಟ್ಟಿತು.
1957ರಲ್ಲಿ ರಾಜ್ಯದ ಸಂವಿಧಾನವನ್ನು ಅಂಗೀಕರಿಸಲಾಯಿತು. 1957ರ ಜನವರಿ 26ರಂದು ನಾನೇ ಆ ಸಂವಿಧಾನಕ್ಕೆ ಸಹಿ ಹಾಕಿದ್ದೇನೆ. 1975ರಲ್ಲಿ ಶೇಖ್ ಅಬ್ದುಲ್ಲಾ ಮತ್ತು ಇಂದಿರಾ ಗಾಂಧಿ ಮಧ್ಯೆ ಮತ್ತೊಂದು ರಾಜಕೀಯ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಬಳಿಕ ಕ್ರಮೇಣ ಹಲವು ಆಯೋಗಗಳು ನೇಮಕಗೊಂಡವು. ಆದರೂ, ಜಮ್ಮು ಮತ್ತು ಕಾಶ್ಮೀರದ ನಿಖರ ಸ್ಥಿತಿ ಹಾಗೂ ಭಾರತದೊಂದಿಗಿನ ಸಂಬಂಧದ ಕುರಿತು ಇನ್ನೂ ಅನಿಶ್ಚಿತತೆ ಮುಂದುವರಿದಿದೆ. ಅದು ಭಾರತದ ಅವಿಭಾಜ್ಯ ಅಂಗ ಎಂಬುದರಲ್ಲಿ ಸಂದೇಹವೇ ಇಲ್ಲ. ಆದರೆ ಯಾವ ರೀತಿಯ ಸಂಬಂಧ ಹೊಂದಿರಬೇಕು ಎಂಬ ಬಗ್ಗೆ ಗೊಂದಲವಿದೆ. ಹಲವು ಒಕ್ಕೂಟ ರಾಷ್ಟ್ರಗಳಲ್ಲಿ ವಿವಿಧ ರೀತಿಯ ವ್ಯವಸ್ಥೆಯಿದೆ. ಚೀನಾದಲ್ಲಿ ಒಂದು ದೇಶ, ಎರಡು ವ್ಯವಸ್ಥೆಯಿದೆ. ಆದ್ದರಿಂದ ಅವಿಭಾಜ್ಯ ಅಂಗ ಎಂಬ ಪದವನ್ನು ಡಿಕ್ಷನರಿಯಲ್ಲಿ ತಿಳಿಸಿದಂತೆ ಅರ್ಥೈಸಿಕೊಳ್ಳಬಾರದು ಮತ್ತು ಕಾಶ್ಮೀರದ ವಿಷಯದಲ್ಲಿ ಆ ಅರ್ಥ ಬರುವುದಿಲ್ಲ. ಆದ್ದರಿಂದಲೇ ಈ ಗೊಂದಲವಿನ್ನೂ ಬಗೆಹರಿದಿಲ್ಲ. ಇದನ್ನು ಆದಷ್ಟು ಬೇಗ ಬಗೆಹರಿಸದಿದ್ದರೆ ಗೊಂದಲ ಹೆಚ್ಚಾಗುತ್ತಾ ಹೋಗುತ್ತದೆ ಎಂದು ಕರಣ್ ಸಿಂಗ್ ರಾಜ್ಯಸಭೆಯಲ್ಲಿ ಹೇಳಿದ್ದರು.
ಜಮ್ಮು ಮತ್ತು ಕಾಶ್ಮೀರದ ಪ್ರಪ್ರಥಮ ರಾಜ್ಯಪಾಲರಾಗಿ 1965ರ ಮಾರ್ಚ್ 30ರಂದು ಕರಣ್ ಸಿಂಗ್‌ರನ್ನು ನೇಮಕ ಮಾಡಲಾಗಿತ್ತು.







