ಉತ್ತಮ ವ್ಯಕಿತ್ವದಿಂದ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ: ಬೆಂಗಳೂರು ವಿವಿ ಕುಲಸಚಿವ ಡಾ.ಬಿ.ಕೆ.ರವಿ

ಬೆಂಗಳೂರು, ಆ. 5: ‘ವಿದ್ಯಾರ್ಥಿಗಳು ಶಿಸ್ತು, ಸಂಯಮ, ಸಮಯ ಪಾಲನೆ ರೂಢಿಸಿಕೊಳ್ಳುವ ಮೂಲಕ ಒಳ್ಳೆಯ ಶಿಕ್ಷಣ ಪಡೆದರೆ ಮಾತ್ರವೇ ಉತ್ತಮ ವ್ಯಕ್ತಿತ್ವ ಹಾಗೂ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಬೆಂಗಳೂರು ವಿಶ್ವ ವಿದ್ಯಾಲಯದ ಕುಲಸಚಿವ ಡಾ.ಬಿ.ಕೆ.ರವಿ ತಿಳಿಸಿದ್ದಾರೆ.
ಸೋಮವಾರ ಇಲ್ಲಿನ ಜಾಲಹಳ್ಳಿಯ ಸೈಂಟ್ ಕ್ಲಾರೆಟ್ ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ತರಗತಿಗಳ ಆರಂಭದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಹೆಚ್ಚೆಚ್ಚು ಅಧ್ಯಯನ ಶೀಲತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ರೆ.ಡಾ.ಫಾ. ಸಾಬುಜಾರ್ಜ್, ವಿದ್ಯಾರ್ಥಿಗಳು ಶಿಕ್ಷಣದ ಬಗ್ಗೆ ಹೆಚ್ಚು ಗಮನಹರಿಸಿ, ಶ್ರದ್ದೆ, ಭಕ್ತಿಯಿಂದ ಕಲಿತರೆ ರಾಷ್ಟ್ರದ ನಿರ್ಮಾಣಕ್ಕೆ ದಾರಿದೀಪವಾಗುತ್ತದೆ. ಜತೆಗೆ ಭವಿಷ್ಯಕ್ಕೆ ಅನುಕೂಲವಾಗಲಿದೆ ಎಂದು ಸೂಚಿಸಿದರು. ಇತ್ತೀಚಿನ ದಿನಗಳಲ್ಲಿ ಆಧುನಿಕ ಬದುಕು ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸುವಂತೆ ಮಾಡುತ್ತಿದೆ. ಜತೆಗೆ ಕೆಟ್ಟ ಹವ್ಯಾಸಗಳು ಸಮಾಜದ ಕಂಟಕಗಳೆನಿಸಿವೆ. ಆದುದರಿಂದ ವಿದ್ಯಾರ್ಥಿಗಳು ಹಿರಿಯರ ಆದರ್ಶಗಳನ್ನು ರೂಢಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಫಾ.ಜೋಸೆಫ್ ಮಾಥ್ಯು, ಫಾ.ಅಬ್ರಹಾಂ, ಮಾದೇಶ್, ಮಾರಿಯಾ ಡಿಸೋಜ್, ಜಯಲಕ್ಷ್ಮಿ, ಸೀಮಾ ಜೋಸೆಫ್ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.








