ನೈಸರ್ಗಿಕ ನಾಗಬನಗಳ ಕಾಂಕ್ರೀಟಿಕರಣದಿಂದ ಪರಿಸರ ನಾಶ: ದಿನೇಶ್ ಹೊಳ್ಳ
‘ನಾಗಬನವೆಂಬ ಸ್ವರ್ಗೀಯ ತಾಣ’ ಕೃತಿ ಬಿಡುಗಡೆ

ಉಡುಪಿ, ಆ.9: ಇಂದು ನಾಗಾರಾಧನೆಗೆ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ. ಇದರ ಪರಿಣಾಮವಾಗಿ ನೈಸರ್ಗಿಕ ನಾಗಬನಗಳನ್ನು ತೆರವುಗೊಳಿಸಿ ಕಾಂಕ್ರೀಟ್ ನಾಗಬನಗಳನ್ನಾಗಿ ಮಾಡಲಾಗುತ್ತಿದೆ. ಇದು ಪರಿಸರ ಮಾರಕವಾಗಿದೆ. ಹಾವಿನ ಕುರಿತ ಕಪ್ಪೋಲ ಕಲ್ಪಿತ ನಂಬಿಕೆಗಳನ್ನು ನಿವಾರಣೆ ಮಾಡಬೇಕಾದ ಅಗತ್ಯವಿದೆ ಎಂದು ಎಂದು ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ತಿಳಿಸಿದ್ದಾರೆ.
ಉಡುಪಿಯ ನಮ್ಮ ಮನೆ ನಮ್ಮ ಮರ ಸಂಘಟನೆಯ ವತಿಯಿಂದ ನೈಸರ್ಗಿಕ ನಾಗಬನ ಮತ್ತು ನಾಗಾರಾಧನೆ ಎಂಬ ಪುರಾತನ ಸಂಸ್ಕೃತಿಯನ್ನು ಸಂರಕ್ಷಿಸುವ ಕುರಿತು ಉರಗ ತಜ್ಞ ಗುರುರಾಜ ಸನಿಲ್ ಬರೆದ ‘ನಾಗಬನವೆಂಬ ಸ್ವರ್ಗೀಯ ತಾಣ’ ಕೃತಿಯನ್ನು ಸೋಮವಾರ ಪೆರಂಪಳ್ಳಿಯ ನೈಸರ್ಗಿಕ ನಾಗಬನದಲ್ಲಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡುತಿದ್ದರು.
ಕಾಡು ಪ್ರಾಣಿಗಳ ದಾಳಿಗೆ ಮನುಷ್ಯನ ಕುಚೆಷ್ಠೆಯೇ ಕಾರಣ. ಕಾಡು, ವನ್ಯ ಜೀವಿ, ಪ್ರಾಣಿ ಸಂಕುಲ, ಜಲ ಸಂಪನ್ಮೂಲಗಳ ಬಗ್ಗೆ ನಿರ್ಲಕ್ಷ್ಯವಹಿಸುತ್ತಿರುವ ಪರಿಣಾಮ ಪಶ್ಚಿಮ ಘಟ್ಟಗಳು ಇಂದು ಮಾಫಿಯಾಗಳ ಮುಷ್ಠಿಯಲ್ಲಿದೆ. ನಗರವಾಸಿಗಳಿಗೆ ಕಾಡು, ನದಿಗಳು ಕಸದ ತೊಟ್ಟಿಯಾದರೆ ಜನಪ್ರತಿನಿಧಿಗಳಿಗೆ ಹಣ ನೀಡುವ ಎಟಿಎಂ ಆಗಿದೆ ಎಂದು ಅವರು ಟೀಕಿಸಿದರು.
ಪಶ್ಚಿಮ ಘಟ್ಟವನ್ನು ಸರಕಾರ ವ್ಯವಹಾರಿಕಾ ದೃಷ್ಟಿಯಿಂದ ನೋಡುತ್ತಿರುವುದ ರಿಂದ ರೆಸಾರ್ಟ್ ಹಾಗೂ ಮೂಲಭೂತ ಸೌಕರ್ಯದ ಹೆಸರಿನಲ್ಲಿ ಅರಣ್ಯ ನಾಶ ಮಾಡಲಾಗುತ್ತಿದೆ. ನೇತ್ರಾವತಿ, ಶರಾವತಿ ನದಿಯ ಹೆಸರಿನಲ್ಲಿ ಕೋಟಿ ಕೋಟಿ ಹಣದ ದೋಚಲಾಗುತ್ತಿದೆ ಎಂದು ಅವರು ದೂರಿದರು.
ಲೇಖಕ ಗುರುರಾಜ್ ಸನಿಲ್ ಮಾತನಾಡಿ, ನಮ್ಮ ಬೇಜವಾಬ್ದಾರಿತನ ದಿಂದಾಗಿ ಇಂದು ನೈಸರ್ಗಿಕ ನಾಗಬನಗಳು ನಾಶವಾಗುತ್ತಿವೆ. ನಾಗಬನದ ಜೀರ್ಣೋದ್ಧಾರದ ಹೆಸರಿನಲ್ಲಿ ಹಲವು ಬಗೆಯ ಹಾವುಗಳು ಸಾಯುತ್ತಿವೆ. ನೈಸರ್ಗಿಕ ಬನಗಳಿಂದ ನೀರು ಇಂಗುವುದರಿಂದ ಅಂತರ್ಜಲ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಉಡುಪಿಯ ಸಮಾಜ ಸೇವಕ ಯು.ವಿಶ್ವನಾಥ ಶೆಣೈ, ನಗರಸಭಾ ಮಾಜಿ ಸದಸ್ಯ ಪ್ರಶಾಂತ್ ಪೆರಂಪಳ್ಳಿ ಉಪಸ್ಥಿತರಿದ್ದರು. ವಾಸುದೇವ್ ಭಟ್ ಪೆರಂಪಳ್ಳಿ ನಾಗಬನಕ್ಕೆ ಪೂಜೆ ಸಲ್ಲಿಸಿದರು. ನಮ್ಮ ಮನೆ ನಮ್ಮ ಮರ ಸಂಘಟನೆಯ ಅವಿನಾಶ್ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿರಾಜ್ ಎಚ್. ಪಿ. ಕಾರ್ಯಕ್ರಮ ನಿರೂಪಿಸಿದರು.







