ದನಕಳವು ಆರೋಪ: ಮೂವರು ಸೆರೆ
ಮಂಗಳೂರು, ಆ.5: ನಗರದ ವಳಚ್ಚಿಲ್ ರೈಲ್ವೆಗೇಟ್ ಸಮೀಪ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಮೂವರನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಮೇರ್ಲಪದವು ನಿವಾಸಿ ಜೋಯಲ್(30), ಫರಂಗಿಪೇಟೆ ಅಮ್ಮೆಮ್ಮಾರ್ ನಿವಾಸಿಗಳಾದ ನವಾಝ್(25), ರಿಯಾಝ್ (26) ಬಂಧಿತ ಆರೋಪಿಗಳು.
ಆರೋಪಿಗಳು ಮೇರ್ಲಪದವಿನಿಂದ ಅಮ್ಮೆಮ್ಮಾರ್‌ಗೆ ವಾಹನದಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮಂಗಳೂರು ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಭಜಂತ್ರಿ ನೇತೃತ್ವದ ತಂಡ ವಳಚ್ಚಿಲ್ ರೈಲ್ವೇಗೇಟ್ ಬಳಿ ದಾಳಿ ನಡೆಸಿತು. ಈ ಸಂದರ್ಭ ಒಬ್ಬ ಆರೋಪಿ ಸಹಿತ ಒಂದು ಜಾನುವಾರು ವಶಪಡಿಸಿಕೊಳ್ಳಲಾಗಿದೆ. ಇಬ್ಬರು ಪರಾರಿಯಾಗಿದ್ದರು. ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ನೀರುಮಾರ್ಗದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





