ಏಳು ವರ್ಷದ ಮಗಳನ್ನು ಕೊಲೆಗೈದು ತಾಯಿ ಆತ್ಮಹತ್ಯೆ
ಬೆಂಗಳೂರು, ಆ.6: ಏಳು ವರ್ಷದ ಮಗಳನ್ನು ಕೊಲೆಗೈದು ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಪುಟ್ಟೇನಹಳ್ಳಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಪುಟ್ಟೇನಹಳ್ಳಿ ನಿವಾಸಿ ಜ್ಯೋತಿ ಎಂಬಾಕೆ ತನ್ನ ಏಳು ವರ್ಷದ ಪುತ್ರಿ ಶಾಬು ಅನ್ನು ಕೊಲೆಗೈದು, ತಾನೂ ಸಹ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿದೆ.
ಹತ್ತು ವರ್ಷಗಳ ಹಿಂದೆ ಪಂಕಜ್ ಎಂಬವರನ್ನು ಜ್ಯೋತಿ ಮದುವೆಯಾಗಿದ್ದರು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ರವಿವಾರ ರಾತ್ರಿ ಜ್ಯೋತಿ ಹಾಗೂ ಪಂಕಜ್ ನಡುವೆ ಗಲಾಟೆ ನಡೆದಿತ್ತು. ಕೌಟುಂಬಿಕ ಕಲಹದಿಂದ ಬೇಸತ್ತ ಜ್ಯೋತಿ ಮೊದಲು ತನ್ನ ಏಳು ವರ್ಷದ ಮಗಳು ಶಾಬುವನ್ನು ಕೊಲೆ ಮಾಡಿದ್ದಾಳೆ. ಬಳಿಕ ಕಟ್ಟಡದಿಂದ ಜಿಗಿದು ತಾನು ಕೂಡ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.
ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲು ಮಾಡಲಾಗಿದ್ದು, ತನಿಖೆ ಮುಂದುವರೆಸಲಾಗಿದೆ.
Next Story