ಪ್ರಧಾನಿ, ಕೇಂದ್ರ ಸಚಿವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ
ರಾಜ್ಯದ ಅಭಿವೃದ್ಧಿಗೆ ನೆರವು ಯಾಚನೆ

ಹೊಸದಿಲ್ಲಿ, ಆ.6: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಹೊಸದಿಲ್ಲಿಗೆ ಭೇಟಿ ನೀಡಿರುವ ಬಿ.ಎಸ್.ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ರಾಜನಾಥ್‌ಸಿಂಗ್, ನಿತಿನ್ ಗಡ್ಕರಿ, ನರೇಂದ್ರಸಿಂಗ್ ತೋಮಾರ್ ಸೇರಿದಂತೆ ಇನ್ನಿತರರನ್ನು ಸಂಸತ್ ಭವನದಲ್ಲಿ ಭೇಟಿ ಮಾಡಿ, ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯ ನೆರವು ನೀಡುವಂತೆ ಮನವಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ- 2ರ ವರದಿ ಹಾಗೂ ಮಹಾದಾಯಿ ಜಲ ವಿವಾದ ನ್ಯಾಯಾಧಿಕರಣದ ವರದಿಗಳನ್ನು ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಮುಖ್ಯಮಂತ್ರಿ ಮನವಿ ಮಾಡಿದರು. ಮೇಕೆದಾಟು ಕುಡಿಯುವ ನೀರು ಹಾಗೂ ಸಮತೋಲಿತ ಜಲಾಶಯ ನಿರ್ಮಾಣ ಯೋಜನೆಯ ಡಿಪಿಆರ್ ಅನುಮೋದಿಸುವಂತೆ ಮನವಿ ಮಾಡಿದರು. ಜೊತೆಗೆ, ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ, ಆರ್ಥಿಕ ನೆರವು ನೀಡಬೇಕು ಹಾಗೂ ಹುಬ್ಬಳ್ಳಿ-ಧಾರವಾಡದಲ್ಲಿ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ ಸ್ಥಾಪಿಸುವಂತೆ ಪ್ರಧಾನಮಂತ್ರಿಗೆ ಮುಖ್ಯಮಂತ್ರಿ ಕೋರಿದರು.
ಗ್ರಾಮೀಣಾಭಿವೃದ್ಧಿ: ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ನರೇಂದ್ರಸಿಂಗ್ ತೋಮಾರ್‌ರನ್ನು ಭೇಟಿ ಮಾಡಿದ ಮುಖ್ಯಮಂತ್ರಿ, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ನೋಂದಣಿ ಅವಧಿಯನ್ನು ಆ.14ರ ವರೆಗೆ ವಿಸ್ತರಿಸುವಂತೆ ಮನವಿ ಮಾಡಿದರು.
ಇದಲ್ಲದೆ, ಬೆಳೆವಿಮೆಯ ಹಿಂದಿನ ಕ್ಲೇಮುಗಳನ್ನು ಇತ್ಯರ್ಥ ಪಡಿಸಲು ಕ್ರಮ ವಹಿಸುವಂತೆಯೂ ಮನವಿ ಮಾಡಿದರು. ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ 2019-20ರ ಅನುದಾನ ಬಿಡುಗಡೆ ಹಾಗೂ ರಾಜ್ಯ ಸರಕಾರವು 2015-16, 2016-17 ಮತ್ತು 2019-20ರಲ್ಲಿ ಪಾವತಿಸಿರುವ ಮುಂಗಡ ಅನುದಾನವನ್ನು ಬಿಡುಗಡೆ ಮಾಡುವಂತೆ ಅವರು ಕೋರಿದರು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರಾಜ್ಯದ ಎಲ್ಲ ಅರ್ಹ ರೈತರಿಗೂ ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಮನವಿ ಮಾಡಿದರು.
ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿಯನ್ನು ಭೇಟಿ ಮಾಡಿದ ಮುಖ್ಯಮಂತ್ರಿ, ರಾಜ್ಯದ ಕೆಲವು ಪ್ರಮುಖ ಹೆದ್ದಾರಿ ಯೋಜನೆಗಳನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳುವಂತೆ ಹಾಗೂ ಶಿವಮೊಗ್ಗ ನಗರಕ್ಕೆ ವರ್ತುಲ ರಸ್ತೆ ನಿರ್ಮಿಸುವ ಯೋಜನೆಗೆ ಅನುಮೋದನೆ ನೀಡುವಂತೆ ಮನವಿ ಮಾಡಿದರು.
ಇದೇ ವೇಳೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ಸಿಂಗ್ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸೌಹಾರ್ದಯುತವಾಗಿ ಭೇಟಿ ಮಾಡಿದರು.









