‘ಟೈಟಾನಿಕ್’ ನಿರ್ಮಿಸಿದ್ದ ಹಡಗುಕಟ್ಟೆಯಿಂದ ದಿವಾಳಿಗೆ ಅರ್ಜ

ಬೆಲ್‌ಫಾಸ್ಟ್ (ನಾರ್ದರ್ನ್ ಐರ್‌ಲ್ಯಾಂಡ್), ಆ. 6: ಐತಿಹಾಸಿಕ ‘ಟೈಟಾನಿಕ್’ ಹಡಗನ್ನು ನಿರ್ಮಿಸಿದ್ದ ನಾರ್ದರ್ನ್ ಐರ್‌ಲ್ಯಾಂಡ್ ದೇಶದ ರಾಜಧಾನಿ ಬೆಲ್‌ಫಾಸ್ಟ್‌ನಲ್ಲಿರುವ ಹಡಗುಕಟ್ಟೆ ‘ಹ್ಯಾಲ್ಯಾಂಡ್ ಆ್ಯಂಡ್ ವುಲ್ಫ್’, ಕಂಪೆನಿ ದಿವಾಳಿಯಾಗಿದೆ ಎಂದು ಘೋಷಿಸುವಂತೆ ಕೋರಿ ಅರ್ಜಿ ಹಾಕಿದೆ.
ಕಂಪೆನಿಗೆ ಸೋಮವಾರ ಲೆಕ್ಕಪತ್ರ ಕಂಪೆನಿ ಬಿಡಿಒವನ್ನು ಆಡಳಿತದಾರನಾಗಿ ನೇಮಿಸಲಾಗಿದೆ.
ಹಡಗು ಕಂಪೆನಿಯನ್ನು ಖರೀದಿಸಲು ಯಾರೂ ಮುಂದೆ ಬಾರದ ಹಿನ್ನೆಲೆಯಲ್ಲಿ, ಅದರ ಮಾತೃ ಸಂಸ್ಥೆ ನಾರ್ವೆಯ ‘ಡಾಲ್ಫಿನ್ ಡ್ರಿಲ್ಲಿಂಗ್’ ದಿವಾಳಿಗೆ ಅರ್ಜಿ ಹಾಕಿದೆ.
ಬೃಹತ್ ಹಡಗು ನಿರ್ಮಾಣ ಕಂಪೆನಿಯಾಗಿರುವ ಹ್ಯಾಲ್ಯಾಂಡ್ ಆ್ಯಂಡ್ ವುಲ್ಫ್‌ನಲ್ಲಿ 20ನೇ ಶತಮಾನದ ಆದಿ ಭಾಗದಲ್ಲಿ 30,000ಕ್ಕೂ ಅಧಿಕ ಜನರು ಕೆಲಸ ಮಾಡುತ್ತಿದ್ದರು. ದಶಕಗಳ ಕಾಲ ಬೆಲ್‌ಫಾಸ್ಟ್‌ನ ತುಂಬೆಲ್ಲ ಕಂಪೆನಿಯ ಬೃಹತ್ ಹಳದಿ ಕ್ರೇನ್‌ಗಳು ಕಾಣ ಸಿಗುತ್ತಿದ್ದವು. ಆದರೆ, ಈಗ ಅಲ್ಲಿ ಕೇವಲ 130 ಕೆಲಸಗಾರರಿದ್ದಾರೆ.
ಈ ಕೆಲಸಗಾರರು ಕಳೆದೊಂದು ವಾರದಿಂದ ಹಡಗು ಕಂಪೆನಿಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಹಾಗೂ ಸರಕಾರ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ಇಲ್ಲಿ ನಿರ್ಮಾಣವಾಗಿದ್ದ ‘ಟೈಟಾನಿಕ್’ ಹಡಗು 1912ರಲ್ಲಿ ಸಮುದ್ರದಲ್ಲಿ ಮುಳುಗಿರುವುದು ಜನಜನಿತವಾಗಿದೆ.







