ಬಂಟ್ವಾಳ: ಮಳೆಯಿಂದಾಗಿ ಕೃತಕ ನೆರೆ, ಮನೆಗಳಿಗೆ ಹಾನಿ

ಬಂಟ್ವಾಳ, ಆ. 6: ಮಳೆಯಿಂದಾಗಿ ತಾಲೂಕಿನ ವಿವಿಧ ಭಾಗಗಳಲ್ಲಿ ಕೃತಕ ನೆರೆ, ಮನೆಗಳಿಗೆ ಹಾನಿ, ಗುಡ್ಡ ಜರಿದು ತೊಂದರೆ, ರಸ್ತೆಯಲ್ಲಿ ನೀರು, ಕೆಸರು ತುಂಬಿ ಸಮಸ್ಯೆಗಳುಂಟಾದ ಕುರಿತು ವರದಿಯಾಗಿದ್ದು, ವಿದ್ಯುತ್ ಪೂರೈಕೆಗೂ ಅಡಚಣೆ ಉಂಟಾಗಿದೆ. ಬಂಟ್ವಾಳ ತಾಲೂಕಿನಲ್ಲಿ ಒಟ್ಟು 48 ಹಾನಿ ಪ್ರಕರಣಗಳು ವರದಿಯಾಗಿವೆ.
ಪಕ್ಕಾ, ಕಚ್ಛಾ ಭಾಗಶಃ ಹಾನಿ 18 ಮನೆಗಳ, 1 ಮನೆ ಸಂಪೂರ್ಣ ಹಾನಿ, 7 ಕಡೆಗಳಲ್ಲಿ ತೋಟಗಾರಿಕಾ ಹಾನಿ, 4 ಕೃಷಿ ಹಾನಿ ಹಾಗೂ 18 ಇತರೇ ಹಾನಿಯಾಗಿರುವ ಬಗ್ಗೆ ವರದಿಯಾಗಿವೆ.
ಎಲ್ಲೆಲ್ಲಿ ಹಾನಿ ?
ಕೊಳ್ನಾಡು ಗ್ರಾಮದ ಕುಡ್ತಮುಗೇರು ಹೊಳೆ ತುಂಬಿ ಹರಿದ ಪರಿಣಾಮ ವಿಟ್ಲ-ಸಾಲೆತ್ತೂರು ರಸ್ತೆಯ ಕುಡ್ತಮುಗೇರು ರಸ್ತೆ ಜಲಾವೃತಗೊಂಡಿದೆ. ಇದರಿಂದ ಸುಮಾರು ತಾಸುಗಳ ವರೆಗೆ ರಸ್ತೆ ಸಂಚಾರದಲ್ಲಿ ಅಸ್ತವ್ಯಸ್ತಗೊಂಡಿದೆ.ವಿಟ್ಲ-ಸಾಲೆತ್ತೂರು ಮಧ್ಯೆ ಸಂಚರಿಸುವ ವಾಹನಗಳು ಮಾದಕಟ್ಟೆ-ಬಾರೆಬೆಟ್ಟು-ಮುಂಡತ್ತಜೆ-ಬಲಿಪಗುಳಿ ಒಳರಸ್ತೆ ಮೂಲಕ ಕೊಡಂಗಾಯಿಗೆ ಸುತ್ತು ಬಳಸಿ ವಿಟ್ಲ ತಲುಪಿವೆ. ಕೊಳ್ನಾಡು ಗ್ರಾಮದ ಕರೈ-ಕಾಡುಮಠದಲ್ಲಿ ರಸ್ತೆಗೆ ಗುಡ್ಡ ಕುಸಿದು ರಸ್ತೆ ಬಂದ್ ಆಗಿದ್ದು, ಕೊಳ್ನಾಡು ಎಸ್‍ಡಿಪಿಐ ಕಾರ್ಯಕರ್ತರು ಮಣ್ಣನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಕುಡ್ತಮುಗೇರು-ಕುಳಾಲು ರಸ್ತೆಯ ಕುದ್ರಿಯಾ ಎಂಬಲ್ಲಿ ಗುಡ್ಡ ಕುಸಿದು ರಸ್ತೆ ಬಿದ್ದಿದೆ. ಇದರಿಂದ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಬಳಿಕ ಸ್ಥಳೀಯರು ತೆರವುಗೊಳಿಸಿದರು. ಕರೋಪಾಡಿ ಗ್ರಾಮದ ಚೆಂಬರ್ಪು ಎಂಬಲ್ಲಿ ಸುಬ್ರಹ್ಮಣ್ಯ -ಮಂಜೇಶ್ವರ ರಾಜ್ಯ ಹೆದ್ದಾರಿಗೆ ಧರೆ ಕುಸಿತ, ವಿಟ್ಲ ಕಸಬಾ ಗ್ರಾಮದಲ್ಲಿ ಕಿಂಡಿ ಅನೆಕಟ್ಟಿಗೆ ಹಾನಿಯಾಗಿವೆ.
ಮನೆಗಳಿಗೆ ಹಾನಿ
ಕೆದಿಲ ಗ್ರಾಮದ ಗಾಂಧಿನಗರದ ರಾಮಣ್ಣ ಗೌಡ ಎಂಬವರ ಅಂಗಡಿ ಪಕ್ಕದ ತಡೆಗೋಡೆ ಬಿದ್ದು, ಸುಮಾರು 20 ಸಾವಿರ ರೂ.ದಷ್ಟು ನಷ್ಟ ಉಂಟಾಗಿದೆ. ಕಾಡಬೆಟ್ಟು ಗ್ರಾಮದ ಜುಬೇದ ಅವರ ಮನೆಗೆ ಹೊಂದಿಕೊಂಡಿರುವ ಗೋಡೆ ಕುಸಿದು ಸುಮಾರು 50 ಸಾವಿರ ರೂ. ಗಳಷ್ಟು ನಷ್ಟ ಸಂಭವಿಸಿದೆ. ಸಜಿಪನಡು ಗ್ರಾಮದ ಬೋಳಮೆ ಎಂಬಲ್ಲಿ ಮುಹಮ್ಮದ್ ರಫಿಕ್ ಎಂಬುವರ ಆವರಣಗೋಡೆ ಕುಸಿದು ದುಲೈಖ ಎಂಬವರ ಮನೆಗೆ ಬಿದ್ದು ಮನೆ ಭಾಗಶಃ ಹಾನಿಯಾಗಿದ್ದು, ಸುಮಾರು 30 ಸಾವಿರ ರೂ ನಷ್ಟ ಸಂಭವಿಸಿದೆ.
ಕಾವಳಮುಡೂರು ಜಯಂತಿ ಎಂಬವರ ಮನೆ ಹಿಂಭಾಗದ ಮಣ್ಣು ಕುಸಿದು 75 ಸಾವಿರ ರೂ. ನಷ್ಟ ಸಂಭವಿಸಿದೆ. ಮಂಚಿ ಗ್ರಾಮದ ಪುದ್ದೊಟ್ಟು ಸಮೀಪ ಗೋಡೆ ಜರಿದು ಸಮೀಪದ ಹರಿಯುವ ತೋಡಿಗೆ ಬಿದ್ದಿದೆ. ಇದರಿಂದಾಗಿ ತೋಡು ಬ್ಲಾಕ್ ಆಗಿ ಸಮೀಪದ ಗದ್ದೆ, ಮನೆಗಳು ಜಲಾವೃತವಾಗಿವೆ.
ಕೆದಿಲ ಗ್ರಾಮದ ವಿಶ್ವನಾಥ ಎಂಬವರ ಮನೆ ಮುಂಭಾಗ ಗಾಳಿಗೆ ಶೀಟ್ ಬಿದ್ದು 5 ಸಾವಿರ ರೂ.ದಷ್ಟು ಹಾನಿಯಾಗಿದೆ. ಸಾಲೆತ್ತೂರು ಗ್ರಾಮದ ಪಾಲ್ತಾಜೆ ನಾರಾಯಣ ಆಚಾರಿರವರ ಮನೆಯ ಸಮೀಪದ ಗುಡ್ಡ ಕುಸಿದು ಮನೆಗೆ ಭಾಗಶಃ ಹಾನಿಯಾಗಿರುತ್ತದೆ. ಸಾಲೆತ್ತೂರು ಗ್ರಾಪಂ ಕಚೇರಿ ಹಿಂಬದಿ ಗುಡ್ಡ ಜರಿದಿದೆ.
ಕೊಡ್ಮಣ್ಣಿನಲ್ಲಿ ಗುಡ್ಡೆಯ ಮಣ್ಣು ಜರಿದು ಸ್ಥಳೀಯ ರಸ್ತೆಗೆ ಹಾನಿಯಾಗಿದೆ. ಬಡಗಕಜೆಗಾರು ಗ್ರಾಮದ ಅದ್ರಾಮ ಮನೆಗೆ ಹಾನಿಯಾದರೆ, ಕಾವಳಮುಡೂರು ಸೀತಾರಾಮ ಶೆಟ್ಟಿ ಅವರ ಮನೆಗೆ ಹಾನಿಯಾಗಿ ಸುಮಾರು 50 ಸಾವಿರ ರೂ ನಷ್ಟವಾಗಿದೆ. ಮೇರಮಜಲು ಗ್ರಾಮದ ಸುನಿತಾ ಹಾಗು ಪುಷ್ಪಾ ಎಂಬವರ ಮನೆಗಳಿಗೆ ಮರ ಬಿದ್ದು ಹಾನಿ, ಬಡಗಕಜೆಕಾರು ಗ್ರಾಮದ ಅಬೂಬಕರ್ ಎಂಬವರ ಮನೆಗೆ ಹಾನಿಯಾಗಿದೆ ಎಂದು ತಾಲೂಕು ಕಚೇರಿಯ ವರದಿ ತಿಳಿಸಿದೆ.
'ಸಂಭಾವ್ಯ ಅಪಾಯ ಎದುರಿಸಲು ತಾಲೂಕಾಡಳಿತ ಸಿದ್ಧ'
ಈಗಾಗಲೇ ತಾಲೂಕಿನಲ್ಲಿ ಮಳೆಯ ಪ್ರವಾಹವನ್ನು ಎದುರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಮುಳುಗುತಜ್ಞರು, ಅಗ್ನಿಶಾಮಕದಳ, ಗೃಹರಕ್ಷಕ ದಳವನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ತಾಲೂಕು ಕಚೇರಿ ಯಾವುದೇ ಸಂಭಾವ್ಯ ಅಪಾಯ ಎದುರಿಸಲು ಸಿದ್ಧವಾಗಿದೆ. ಗಂಜಿಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ತಿಳಿಸಿದ್ದಾರೆ.






.jpg)
.jpg)
.jpg)
.jpg)
.jpg)
.jpg)

